HomeGadag Newsಗದಗ–ಬೆಟಗೇರಿ ನಗರಸಭೆ ವಿವಾದ ಕೇಸ್: ಬಿಜೆಪಿ ಸದಸ್ಯರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಗದಗ–ಬೆಟಗೇರಿ ನಗರಸಭೆ ವಿವಾದ ಕೇಸ್: ಬಿಜೆಪಿ ಸದಸ್ಯರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

For Dai;y Updates Join Our whatsapp Group

Spread the love

ಧಾರವಾಡ: ಗದಗ–ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಇದೀಗ ದ್ವಿಸದಸ್ಯ ಪೀಠ ತಡೆ ನೀಡಿದೆ.

ಈ ತೀರ್ಪಿನಿಂದಾಗಿ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ ಹಾಗೂ ಮುತ್ತು ಮುಷಿಗೇರಿ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಇದರೊಂದಿಗೆ ನಗರಸಭೆಯ ರಾಜಕೀಯ ಸಮೀಕರಣ ಮತ್ತೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಅಮಾನತುಗೊಳಿಸಿದ್ದನ್ನು ಏಕಸದಸ್ಯ ಪೀಠ ಎತ್ತಿಹಿಡಿದಿತ್ತು. ಇದರ ಪರಿಣಾಮವಾಗಿ ನಗರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ದಾರಿ ಸುಗಮವಾಗಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಧಾರವಾಡ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಮಪ್ರಸಾದ್ ಹಾಗೂ ಶಿವಶಂಕರ ಅಮರಣ್ಣವರ ಅವರಿದ್ದ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಬಿಜೆಪಿ ಸದಸ್ಯರ ಸದಸ್ಯತ್ವ ಸ್ಥಿತಿ ತಾತ್ಕಾಲಿಕವಾಗಿ ಮುಂದುವರಿಯುವಂತಾಗಿದೆ.

ಇನ್ನೊಂದೆಡೆ, ನಗರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ತಡೆ ಆದೇಶಗಳು ಹೊರಬಿದ್ದಿದ್ದು, ಪ್ರಕ್ರಿಯೆ ಅನಿಶ್ಚಿತತೆಯಲ್ಲೇ ಮುಂದುವರಿದಿದೆ.

2026ರ ಮಾರ್ಚ್ 3ರಂದು ನಿಗದಿಯಾಗಿದ್ದ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರಿಂದ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಸದಸ್ಯತ್ವ ರದ್ದತಿ ಆದೇಶಕ್ಕೂ ತಡೆ ಸಿಕ್ಕಿರುವುದರಿಂದ ನಗರಸಭೆಯ ಅಧಿಕಾರ ಸಮೀಕರಣ ಮತ್ತೆ ಗೊಂದಲಕ್ಕೆ ಸಿಲುಕಿದೆ.

ಈ ನಡುವೆ, ಚುನಾವಣಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವೂ ದಾಖಲಾಗಿದ್ದು, ಅವರು ನ್ಯಾಯಾಲಯದಲ್ಲಿ ಹಾಜರಾಗಿ ಹೈಕೋರ್ಟ್ ಆದೇಶ ತಡವಾಗಿ ದೊರೆತ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಹಿಂದಿನ ಚುನಾವಣೆಯನ್ನು ನ್ಯಾಯಾಲಯ ರದ್ದುಗೊಳಿಸಿರುವುದು ಕೂಡ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.

ಈ ಬಗ್ಗೆ ನಗರಸಭೆ ಬಿಜೆಪಿ ಸದಸ್ಯ ಚಂದ್ರು ತಡಸದ ಮಾತನಾಡಿ, ನಗರಸಭೆ ಮೂವರು ಬಿಜೆಪಿ ಸದಸ್ಯರ ಅನರ್ಹತೆ ಪ್ರಶ್ನಿಸಿ ದ್ವಿಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಎರಡು ತಿಂಗಳ ಕಾಲ ವಿಚಾರಣೆ ನಡೆಸಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲಾಗಿದೆ. ಕಾನೂನು ಹೋರಾಟದಲ್ಲಿ ಬಿಜೆಪಿಗೆ ಜಯವಾಗಿದ್ದು, ನಗರಸಭೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಮೂಡಿದೆ ಎಂದರು.

ಒಟ್ಟಿನಲ್ಲಿ, ಗದಗ–ಬೆಟಗೇರಿ ನಗರಸಭೆಯ ರಾಜಕೀಯ ಹೋರಾಟದಲ್ಲಿ ಕಾನೂನು ಹೋರಾಟವೇ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!