ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಕೆರೆಯಲ್ಲಿ ಮಕ್ಕಳನ್ನು ರಕ್ಷಿಸಲು ಹೋಗಿದ್ದ ತಾಯಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರಿನ ಬನಶಂಕರಿ ಮೂಲದ ತಬುಸುಮ್ ಖಾನ್ (24) ಮೃತ ದುರ್ದೈವಿ. ಕುಟುಂಬದ ಸದಸ್ಯರು ಮುರಗಮಲ್ಲದ ದರ್ಗಾಕ್ಕೆ ಭೇಟಿ ನೀಡಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕುಟುಂಬಸ್ಥರು ಕೆರೆಯ ಸಮೀಪ ಕಾಲ ಕಳೆಯುತ್ತಿದ್ದಾಗ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ತಾಯಿ ತಬುಸುಮ್ ಖಾನ್ ಬಟ್ಟೆ ತರಲು ತೆರಳಿದ್ದರು. ಅಷ್ಟರಲ್ಲಿ ಮಕ್ಕಳು ಕೆರೆಯೊಳಗೆ ಹೋಗಿ ಮುಳುಗಲು ಆರಂಭಿಸಿದ್ದಾರೆ.
ಮಕ್ಕಳು ಅಪಾಯದಲ್ಲಿರುವುದನ್ನು ಗಮನಿಸಿದ ತಬುಸುಮ್ ಖಾನ್ ಕೂಡಲೇ ಕೆರೆಗೆ ಹಾರಿದ್ದಾರೆ. ಆದರೆ ಅವರಿಗೆ ಈಜು ಬಾರದ ಕಾರಣ ತಾವೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅದೃಷ್ಟವಶಾತ್ ಅಲ್ಲೇ ಇದ್ದ ಮಕ್ಕಳ ತಂದೆ ಹಾಗೂ ಸಂಬಂಧಿಕ ಯುವಕರು ತಕ್ಷಣ ಕೆರೆಗೆ ಇಳಿದು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಬುಸುಮ್ ಖಾನ್ ರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮಕ್ಕಳನ್ನು ಉಳಿಸಿಕೊಂಡರೂ ಪತ್ನಿಯನ್ನು ಕಳೆದುಕೊಂಡೆ ಎಂದು ಪತಿ ಕಣ್ಣೀರಿಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.



