ಬೆಂಗಳೂರು: ತರಬೇತಿ ಪಡೆಯುತ್ತಿದ್ದ ಗಗನಸಖಿಯೊಬ್ಬಳಿಗೆ ರಸ್ತೆಯಲ್ಲೇ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಗಲೂರು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಸಂತ್ರಸ್ತ ಯುವತಿ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಪರಸ್ಪರ ಪರಿಚಯಸ್ಥರಾಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರ ನಡುವೆ ಬಳಿಕ ಆರೋಪಿ ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.
ಆರೋಪಿಯ ವರ್ತನೆಯಿಂದ ಅಸಹ್ಯಗೊಂಡ ಯುವತಿ ಆತನಿಂದ ದೂರವಾಗಲು ಪ್ರಯತ್ನಿಸಿದ್ದಳು. ಇದರಿಂದ ಕೋಪಗೊಂಡ ಚಂದ್ರಶೇಖರ್, ಯುವತಿ ಕಾಲೇಜಿಗೆ ತೆರಳುವಾಗ ಸ್ನೇಹಿತರೊಂದಿಗೆ ಬೈಕ್ನಲ್ಲಿ ಹಿಂಬಾಲಿಸುತ್ತಿದ್ದ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದು, ನಡುರಸ್ತೆಯಲ್ಲೇ ತಡೆದು ನಿಲ್ಲಿಸಿ ಕಿರಿಕಿರಿ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ನಡುವೆ, ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲೇ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿರಂತರ ಕಿರುಕುಳದಿಂದ ಬೇಸತ್ತ ಯುವತಿ, ಪೋಷಕರೊಂದಿಗೆ ಬಾಗಲೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಚಂದ್ರಶೇಖರ್ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.



