ಬೆಂಗಳೂರು: ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುತ್ತಿದ್ದ ಬೈಕ್ ಸವಾರನಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ.
ಮೃತರನ್ನು ಬೆಂಗಳೂರು ಉತ್ತರ ತಾಲೂಕಿನ ವಡೇರಹಳ್ಳಿ ಗ್ರಾಮದ ನಿವಾಸಿ ಗಿರೀಶ್ (30) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಿಂದ ಡ್ರೈವರ್ ಆಗಿದ್ದು, ಕುಟುಂಬದ ಜವಾಬ್ದಾರಿಯನ್ನು ಹೊತ್ತು ಬದುಕು ಸಾಗಿಸುತ್ತಿದ್ದರು.
ತಂದೆ ಪಾಪಣ್ಣ ನಿಧನದ ಬಳಿಕ ತಾಯಿ ಜಯಮ್ಮ ಅವರೊಂದಿಗೆ ಕುಟುಂಬದ ಆಧಾರವಾಗಿದ್ದ ಗಿರೀಶ್, ಡ್ರೈವಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶುಕ್ರವಾರ ತಡರಾತ್ರಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಶುಕ್ರವಾರ ರಾತ್ರಿ ಸುಮಾರು 12:41ರ ಸುಮಾರಿಗೆ ಟಾಟಾ ಏಸ್ ವಾಹನವು ಗಿರೀಶ್ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಗಿರೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ಬಳಿಕ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಾಹಿತಿ ತಿಳಿದ ತಕ್ಷಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಚಾಲಕನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.



