ರಾಯಚೂರು: ಮದುವೆ ಬ್ರೋಕರ್ ಎಂಬ ನೆಪದಲ್ಲಿ ಜನರನ್ನು ಕರೆಸಿ ಬೈಕ್ ಹಾಗೂ ಹಣ ಕಸಿದುಕೊಳ್ಳುತ್ತಿದ್ದ ಆರೋಪಿಯನ್ನು ಕವಿತಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ದೊಡ್ಡಬಸವ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ “ಹೆಣ್ಣು ತೋರಿಸುವುದಾಗಿ” ಹೇಳಿ ಯುವಕರನ್ನು ಕರೆಸಿ, ಬಳಿಕ ಚಾಕು ತೋರಿಸಿ ಬೆದರಿಸಿ ಬೈಕ್ ಹಾಗೂ ಹಣ ಕಸಿದುಕೊಂಡು ಪರಾರಿಯಾಗುತ್ತಿದ್ದನು. ಈ ಸಂಬಂಧ ಕೊಪ್ಪಳ ಜಿಲ್ಲೆಯ ಶರಣಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು. ಶರಣಪ್ಪ ತನ್ನ ಸ್ನೇಹಿತ ಈಶಪ್ಪ ಜೊತೆ ಕನ್ಯಾ ನೋಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ತನಿಖೆ ವೇಳೆ ಆರೋಪಿಯ ವಿರುದ್ಧ ಬಳ್ಳಾರಿ, ಸಿರಗುಪ್ಪ, ಗಂಗಾವತಿ, ಮಾನ್ವಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಪೊಲೀಸರು ಆರೋಪಿಯ ಮನೆಯಲ್ಲಿ ದಾಳಿ ನಡೆಸಿ 8.40 ಲಕ್ಷ ರೂ. ಮೌಲ್ಯದ 14 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ. ಅವುಗಳನ್ನು ಗಿರವಿ ಇಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದಾನೆ ಎಂಬುದು ತಿಳಿದುಬಂದಿದೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.



