ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾದ ಬಿಳಿಗಿರಿರಂಗನ ಬೆಟ್ಟ (BRT) ಅರಣ್ಯದಲ್ಲಿ ಪ್ರವಾಸಿಗರಿಗೆ ರೋಮಾಂಚನಕಾರಿ ದೃಶ್ಯ ಕಂಡುಬಂದಿದೆ.
ಯಳಂದೂರು ತಾಲೂಕಿನ ಕೆ.ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಸಫಾರಿ ವಾಹನ ಸಂಚರಿಸುತ್ತಿದ್ದ ವೇಳೆ ಬೃಹತ್ ಗಾತ್ರದ ಹೆಬ್ಬುಲಿಯೊಂದು ರಸ್ತೆಗೆ ಆಗಮಿಸಿ ಕೆಲಕಾಲ ವಿಹರಿಸಿದ ಘಟನೆ ನಡೆದಿದೆ.
ಪೊದೆಗಳ ನಡುವಿನಿಂದ ಹೊರಬಂದ ಹುಲಿ ನೇರವಾಗಿ ರಸ್ತೆಯಲ್ಲಿ ಗಾಂಭೀರ್ಯದಿಂದ ನಡೆದು ಹೋಗಿದ್ದು, ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಅತಿ ಸಮೀಪದಿಂದ ದೃಶ್ಯವನ್ನು ಕಂಡು ಬೆರಗಾಗಿದ್ದಾರೆ. ಸಾಮಾನ್ಯವಾಗಿ ಹುಲಿಗಳು ವಾಹನದ ಶಬ್ದಕ್ಕೆ ಕಾಡಿನೊಳಗೆ ಮರೆಯಾಗುವವು. ಆದರೆ ಈ ಬಾರಿ ಹುಲಿ ಯಾವುದೇ ಆತಂಕವಿಲ್ಲದೆ ಕೆಲಕಾಲ ರಸ್ತೆಯಲ್ಲೇ ಇದ್ದು ಬಳಿಕ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ.
ಈ ಅಪರೂಪದ ಕ್ಷಣವನ್ನು ಕಂಡ ಪ್ರವಾಸಿಗರಲ್ಲಿ ಉತ್ಸಾಹ ಮತ್ತು ರೋಮಾಂಚನ ಮೂಡಿದ್ದು, ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಬಿಳಿಗಿರಿರಂಗನ ಬೆಟ್ಟ ಹಾಗೂ ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಹುಲಿಗಳ ಸಂಚಾರ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು, ವನ್ಯಜೀವಿ ಪ್ರಿಯರಲ್ಲಿ ಸಂತಸ ವ್ಯಕ್ತವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.



