ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೊಡೇನಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ.
ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಮೃತರನ್ನು ವರದರಾಜು–ಶ್ಯಾಮಲ ದಂಪತಿಯ ಪುತ್ರ ಕಾರ್ತಿಕ್ (8) ಹಾಗೂ ಬಾಬು–ರೂಪ ದಂಪತಿಯ ಪುತ್ರಿ ತನುಶ್ರೀ (15) ಎಂದು ಗುರುತಿಸಲಾಗಿದೆ. ಅಜ್ಜಿ ಹಾಗೂ ತಾಯಿಯೊಂದಿಗೆ ತೋಟಕ್ಕೆ ತೆರಳಿದ್ದ ವೇಳೆ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದಿದ್ದಾರೆ.
ಮೊದಲು ಕಾರ್ತಿಕ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಕಂಡ ತನುಶ್ರೀ ಆತನನ್ನು ರಕ್ಷಿಸಲು ಹೊಂಡಕ್ಕೆ ಇಳಿದಿದ್ದಾಳೆ. ಆದರೆ ನೀರಿನ ಆಳ ತಿಳಿಯದೆ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.
ತನುಶ್ರೀ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.86 ಅಂಕ ಗಳಿಸಿದ್ದ ವಿದ್ಯಾರ್ಥಿನಿಯಾಗಿದ್ದು, ಬಂಗಾರಪೇಟೆಯ ಡಿ.ಪಿ.ಹಳ್ಳಿಯ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಕಾರ್ತಿಕ್ ತಾಲೂಕಿನ ನಲ್ಲಗುಟ್ಟಹಳ್ಳಿಯ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿಯಾಗಿದ್ದ.
ಘಟನೆ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಕಳೆದುಕೊಂಡು ಪೋಷಕರು ಶೋಕಸಾಗರದಲ್ಲಿ ಮುಳುಗಿದ್ದು, ಗ್ರಾಮದಲ್ಲಿ ಮೌನ ವಾತಾವರಣ ನಿರ್ಮಾಣವಾಗಿದೆ.
ಘಟನೆ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



