ಶಿವಮೊಗ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಫ್ಲೋರಾ ನ್ಯಾನ್ಸಿ ಮತ್ತು ರಾಜಶೇಖರಯ್ಯ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿದ್ದು, ಜೊತೆಗೆ 14 ಲಕ್ಷ ರೂಪಾಯಿ ದಂಡ ಹಾಗೂ ದೂರುದಾರರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ ನೋಡಿದರೆ, ಫ್ಲೋರಾ ನ್ಯಾನ್ಸಿ ಭದ್ರಾವತಿಯ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ಹತ್ತಿರದ ಸಂಬಂಧಿ ಪ್ರಕಾಶ್ ಬಾಬು ಜೊತೆ ಅವರ ವಿವಾಹವಾಗಿತ್ತು. ಟ್ಯಾಕ್ಸಿ ಚಾಲಕರಾಗಿದ್ದ ಪ್ರಕಾಶ್ ಬಾಬು ದಂಪತಿಗೆ ಮಕ್ಕಳಿರಲಿಲ್ಲ.
ವಿವಾಹದ ಕೆಲ ವರ್ಷಗಳ ನಂತರ ಫ್ಲೋರಾ ನ್ಯಾನ್ಸಿಗೆ ರಾಜಶೇಖರಯ್ಯ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಇದಕ್ಕೆ ಪತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು ಎಂದು ತಿಳಿದುಬಂದಿದೆ.
2020ರ ಜನವರಿ 15ರಂದು ರಾತ್ರಿ, ಸುರಗಿತೋಪಿನ ಮನೆಯಲ್ಲಿದ್ದಾಗ ಫ್ಲೋರಾ ನ್ಯಾನ್ಸಿ ಪತಿಗೆ ತಂಪು ಪಾನೀಯದಲ್ಲಿ ನಿದ್ರೆಮಾತ್ರೆ ಬೆರೆಸಿ ಕುಡಿಸಿದ್ದಳು ಎಂದು ಆರೋಪಿಸಲಾಗಿದೆ. ಪತಿ ನಿದ್ರೆಗೆ ಜಾರಿದ ಬಳಿಕ ಪ್ರಿಯಕರ ರಾಜಶೇಖರಯ್ಯನನ್ನು ಮನೆಗೆ ಕರೆಸಿ, ಇಬ್ಬರೂ ಸೇರಿ ಪತಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ನಂತರ ಶವವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಸಮೀಪದ ಭದ್ರಾ ನಾಲೆಗೆ ಎಸೆದಿದ್ದರು. ಮೂರು ದಿನಗಳ ಬಳಿಕ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು.
ಆದರೆ ಮೃತನ ಸಹೋದರ ಫ್ರಾನ್ಸಿಸ್ ನೀಡಿದ ದೂರಿನ ಆಧಾರದ ಮೇಲೆ ಪೇಪರ್ ಟೌನ್ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಯಿತು. ವಿಚಾರಣೆಯಲ್ಲಿ ಆರೋಪ ಸಾಬೀತಾಗಿ ಇದೀಗ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.



