ಚೆನ್ನೈ: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷವನ್ನು ‘ಊಸರವಳ್ಳಿ’ಗೆ ಹೋಲಿಸಿ ಅಣ್ಣಾಮಲೈ ಟೀಕಿಸಿದ್ದಾರೆ.
ತಮಿಳುನಾಡಿನಲ್ಲಿ ಇಷ್ಟು ವರ್ಷ ಡಿಎಂಕೆ ಭಾಷೆಯನ್ನೇ ಮಾತನಾಡುತ್ತಿದ್ದ ಕಾಂಗ್ರೆಸ್, ಇದೀಗ ನಟ ವಿಜಯ್ ಪಕ್ಷದತ್ತ ಒಲವು ತೋರಿಸುತ್ತಿದೆ. “ಊಸರವಳ್ಳಿಯೂ ಕೂಡ ಇಷ್ಟು ವೇಗವಾಗಿ ಬಣ್ಣ ಬದಲಿಸೋದಿಲ್ಲ” ಎಂದು ಅಣ್ಣಾಮಲೈ ವ್ಯಂಗ್ಯವಾಡಿದರು.
ಕಾಂಗ್ರೆಸ್ ತನ್ನ ಸ್ವತಂತ್ರ ಅಸ್ತಿತ್ವ ಕಳೆದುಕೊಂಡಿದ್ದು, ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳ ಬೆನ್ನೇರಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ದಕ್ಷಿಣ ಭಾರತದ ರಾಜಕೀಯ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
“ಕಾಂಗ್ರೆಸ್ ಯಾವದಾದರೂ ಒಂದು ದಕ್ಷಿಣ ರಾಜ್ಯದಲ್ಲಿ ಗೆದ್ದರೆ ಸಾಕು, ದಕ್ಷಿಣ ಭಾರತ ಬೇರೆ, ತಮಿಳುನಾಡು ಬೇರೆ, ಕೇರಳ ಬೇರೆ ಎಂದು ಕೆಲ ಸಂಸದರು ಟ್ವೀಟ್ ಮಾಡೋಕೆ ಶುರುಮಾಡ್ತಾರೆ” ಎಂದು ಹೇಳಿದ ಅಣ್ಣಾಮಲೈ, ಶಶಿ ತರೂರ್ ಅಂತಹ ನಾಯಕರಿಗೆ ಹತ್ತಿರವಾಗಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದೂ ಅಣ್ಣಾಮಲೈ ಆರೋಪಿಸಿದರು. “ಲಕ್ಷಾಂತರ ಮತಗಳನ್ನು ತೆಗೆದುಹಾಕಲಾಗಿದೆ ಎನ್ನುವ ಆರೋಪಕ್ಕೆ ಯಾವುದೇ ಸಾಕ್ಷ್ಯ ಇಲ್ಲ” ಎಂದು ತಿರುಗೇಟು ನೀಡಿದರು.
ಅಣ್ಣಾಮಲೈ ಟೀಕೆಗೆ ಪ್ರತಿಕ್ರಿಯಿಸಿದ ಶಶಿ ತರೂರ್, “ಅವರು ಚಮಿಲಿಯನ್ ಅಲ್ಲ, ತಮಿಳಿಯನ್ ಅಂತ ಹೇಳಿರಬಹುದು” ಎಂದು ಹಾಸ್ಯಾತ್ಮಕವಾಗಿ ಉತ್ತರಿಸಿ ವೇದಿಕೆಯಲ್ಲಿ ನಗುವಿನ ಅಲೆ ಎಬ್ಬಿಸಿದರು.



