ಉಡುಪಿ: ಮಣ್ಣು ತೆಗೆಯಲು ಬಾವಿಗೆ ಇಳಿದಿದ್ದ ಮೂವರು ಕಾರ್ಮಿಕರು ಬಾವಿಯಲ್ಲಿ ಸಿಲುಕಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ಕಾರ್ಕಳ ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಎಂಬುವರು ಬಾವಿಯ ಮಣ್ಣು ತೆಗೆಯುವ ಕೆಲಸಕ್ಕಾಗಿ ಒಳಗಿಳಿದಿದ್ದರು. ಈ ವೇಳೆ ರಾಜೇಶ್ ಮೇಲಕ್ಕೆ ಬರುವ ಪ್ರಯತ್ನದಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಅವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್ ನಾಯ್ಕ ಕೂಡ ಬಾವಿಯೊಳಗೆ ಸಿಲುಕಿಕೊಂಡಿದ್ದರು.
ಘಟನೆಯ ಬಗ್ಗೆ ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಹಳ ಪ್ರಯತ್ನದ ಬಳಿಕ ಮೂವರನ್ನೂ ಬಾವಿಯಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಗಾಯಗೊಂಡಿದ್ದ ರಾಜೇಶ್ ಅವರನ್ನು ತಕ್ಷಣವೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಇತರಿಬ್ಬರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ವೇಳೆ ಸ್ಥಳೀಯರು ಆತಂಕಕ್ಕೊಳಗಾಗಿದ್ದರೂ, ಅಗ್ನಿಶಾಮಕ ದಳದ ತ್ವರಿತ ಕಾರ್ಯದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.



