ರಾಮನಗರ: ಹೃದಯಾಘಾತದಿಂದ ನಿಧನರಾದ ಕನ್ನಡದ ಖ್ಯಾತ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ರಾಮನಗರ ತಾಲೂಕಿನ ಗುನ್ನೂರು ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಂತಿಮ ವಿದಾಯ ನೀಡಲಾಯಿತು. ಲಿಂಗಾಯತ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಕಲಾವಿದರು ಹಾಗೂ ಗ್ರಾಮಸ್ಥರು ಭಾಗಿಯಾಗಿ ಕಂಬನಿ ಮಿಡಿದರು.
ದಿಲೀಪ್ ರಾಜ್ ಅವರು ಗುನ್ನೂರಿನ ತೋಟದ ಮನೆಯನ್ನು ವಿಶೇಷವಾಗಿ ಇಷ್ಟಪಡುತ್ತಿದ್ದರು. ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿಗೆ ತೆರಳಿ ಸಮಯ ಕಳೆಯುತ್ತಿದ್ದರು. ಹಳೆಯ ಶೈಲಿಯ ತೊಟ್ಟಿ ಮನೆ ನಿರ್ಮಿಸಿಕೊಂಡಿದ್ದ ಅವರು, ಗ್ರಾಮಸ್ಥರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಹೀಗಾಗಿ ಅವರ ಇಚ್ಛೆಯಂತೆ ಅಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಂತ್ಯಕ್ರಿಯೆಗೆ ಮುನ್ನ ರೇವಣಸಿದ್ದೇಶ್ವರ ಮಠದ ರಾಜಶೇಖರ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಕುಟುಂಬದ ಸದಸ್ಯರು ಪೂಜಾ ಕಾರ್ಯ ನೆರವೇರಿಸಿದರು.
ಅಂತಿಮ ದರ್ಶನಕ್ಕೆ ನಟ ಸೃಜನ್ ಲೋಕೇಶ್, ಅನುಪ್ರಭಾಕರ್, ರಘು ಮುಖರ್ಜಿ, ಜಗಪ್ಪ, ಮಂಜು ಪಾವಗಡ, ಹುಲಿ ಕಾರ್ತಿಕ್ ಸೇರಿದಂತೆ ಅನೇಕ ಕಲಾವಿದರು ಆಗಮಿಸಿ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರ ಆಕ್ರಂದನ ಕಂಡು ಅಲ್ಲಿದ್ದವರು ಭಾವುಕರಾದರು.
‘ಬಾಯ್‌ಫ್ರೆಂಡ್’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದ ದಿಲೀಪ್ ರಾಜ್, ‘ಮಿಲನ’ ಸಿನಿಮಾದ ವಿಲನ್ ಪಾತ್ರದಿಂದ ಮನೆಮಾತಾಗಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಕಿರುತೆರೆಯಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದರು. ‘ಸುಗ್ರೀವ’, ‘ಗೆಳೆಯ’, ‘ಯೂ ಟರ್ನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು.
ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದನ ಅಗಲಿಕೆ ಅಭಿಮಾನಿಗಳಲ್ಲಿ ದುಃಖದ ವಾತಾವರಣ ನಿರ್ಮಿಸಿದೆ.



