ಕಾನ್ ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರ ರೆಡ್ ಕಾರ್ಪೆಟ್ ಎಂಟ್ರಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಲಿಯಾ ಫೋಟೋಗೆ ಪೋಸ್ ನೀಡುತ್ತಿದ್ದ ವೇಳೆ ಛಾಯಾಗ್ರಾಹಕರು ಬೇರೆ ಸೆಲೆಬ್ರಿಟಿಗಳತ್ತ ಗಮನ ಹರಿಸಿದ್ದ ದೃಶ್ಯ ವೈರಲ್ ಆಗಿದ್ದು, ‘ಯಾರೂ ಆಲಿಯಾ ಅವರನ್ನು ಗುರುತಿಸಲಿಲ್ಲವೇ?’ ಎಂಬ ಪ್ರಶ್ನೆ ಮೂಡಿಸಿದೆ.
ವೈರಲ್ ವಿಡಿಯೋದಲ್ಲಿ ಆಲಿಯಾ ಭಟ್ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಆತ್ಮವಿಶ್ವಾಸದಿಂದ ನಡೆದು ಬರುತ್ತಿರುವುದು ಕಾಣಿಸುತ್ತದೆ. ಅವರು ಕ್ಯಾಮೆರಾಗಳಿಗೆ ಕೈ ಬೀಸಿ ಫ್ಲೈಯಿಂಗ್ ಕಿಸ್ ನೀಡುತ್ತಿದ್ದರೂ, ಪಕ್ಕದಲ್ಲಿದ್ದ ಕೆಲವು ಫೋಟೋಗ್ರಾಫರ್‌ಗಳು ಅಂತಾರಾಷ್ಟ್ರೀಯ ತಾರೆಯರ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು.
ಇದನ್ನು ನೋಡಿ ಕೆಲ ನೆಟ್ಟಿಗರು ಆಲಿಯಾ ಅವರನ್ನು ಟ್ರೋಲ್ ಮಾಡಿದ್ದು, ‘ಕಾನ್‌ನಲ್ಲಿ ಅವರಿಗೆ ಯಾರೂ ಗಮನವೇ ಕೊಡಲಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ಭಾರತೀಯ ಚಿತ್ರರಂಗಕ್ಕೆ ಮುಜುಗರದ ಸಂಗತಿ ಎಂದು ಬರೆದಿದ್ದಾರೆ.
ಆದರೆ ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ. ‘ರೆಡ್ ಕಾರ್ಪೆಟ್‌ನಲ್ಲಿ ನೂರಾರು ಛಾಯಾಗ್ರಾಹಕರು ಇರುತ್ತಾರೆ. ಬೇರೆ ಬೇರೆ ದಿಕ್ಕಿನಿಂದ ಫೋಟೋ ತೆಗೆದುಕೊಳ್ಳುತ್ತಾರೆ. ವೈರಲ್ ಆಗಿರುವ ಕ್ಲಿಪ್ ನೋಡಿ ತೀರ್ಪು ಕೊಡಬಾರದು’ ಎಂದು ಹೇಳಿದ್ದಾರೆ.
ಕಾನ್ ಸಿನಿಮೋತ್ಸವವು ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದ್ದು, ಈ ಬಾರಿ ಕೂಡ ಹಲವು ಭಾರತೀಯ ತಾರೆಯರು ಅದ್ದೂರಿಯಾಗಿ ಭಾಗವಹಿಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಪ್ಟೆಂಬರ್ 21’ ಸೇರಿದಂತೆ ಕೆಲವು ಭಾರತೀಯ ಸಿನಿಮಾಗಳು ಕೂಡ ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ.



