ಕೋಲಾರ: ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿ ಪ್ರದೇಶದಲ್ಲಿ ಭಾರಿ ಪ್ರಮಾಣದ ಬುಲೆಟ್‌ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಒಟ್ಟು 214 ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಸರಮಲ್ಲ ಬ್ರಿಡ್ಜ್ ಬಳಿ ಅಪರಿಚಿತರು ಈ ಬುಲೆಟ್‌ಗಳನ್ನು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ವೇಳೆ 135 ಜೀವಂತ ಗುಂಡುಗಳು ಮತ್ತು 85 ಖಾಲಿ ಕಾರ್ಟ್ರಿಡ್ಜ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
7.6 mm ಮಾದರಿಯ ಈ ಗುಂಡುಗಳು 1969ರಲ್ಲಿ ಮಹಾರಾಷ್ಟ್ರದಲ್ಲಿ ತಯಾರಾದವುಗಳಾಗಿದ್ದು, ಇವು ಮಿಷನ್ ಗನ್ ಹಾಗೂ ಎಸ್‌ಎಲ್‌ಆರ್ ರೈಫಲ್‌ಗಳಿಗೆ ಬಳಸುವ ಮಾದರಿಯವು ಎಂದು ತಿಳಿದುಬಂದಿದೆ.
ಇವು ಹಳೆಯ ಸ್ಟಾಕ್‌ನ ಮಿಸ್‌ಫೈರ್ ಅಥವಾ ಡಮ್ಮಿ ಬುಲೆಟ್‌ಗಳಾಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಹಲವು ತಿಂಗಳ ಹಿಂದೆಯೇ ಇವುಗಳನ್ನು ಇಲ್ಲಿ ತ್ಯಜಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕಾಮಸಮುದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಮದ್ದುಗುಂಡುಗಳ ಮೂಲ ಹಾಗೂ ಉದ್ದೇಶದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.



