ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಮತ್ತೆ ಏರಿಕೆ ಆಗಿದ್ದು, ಪ್ರತಿ ಲೀಟರ್ಗೆ ಸುಮಾರು 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ತೈಲ ಕಂಪನಿಗಳು ಶುಕ್ರವಾರ ಬೆಳಗ್ಗೆ ಹೊಸ ದರಗಳನ್ನು ಘೋಷಿಸಿದ್ದು, ಪರಿಷ್ಕೃತ ಬೆಲೆಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 94.77 ರೂ.ಗಳಿಂದ 97.77 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರವೂ 87.67 ರೂ.ಗಳಿಂದ 90.67 ರೂ.ಗೆ ಹೆಚ್ಚಳವಾಗಿದೆ. ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ರಾಜ್ಯಾವಾರು ಇಂಧನ ದರಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಲಿದೆ.
ಬೆಂಗಳೂರುನಲ್ಲಿ ಪೆಟ್ರೋಲ್ ದರ ಲೀಟರ್ಗೆ 3.27 ರೂ. ಏರಿಕೆಯಾಗಿ 106.17 ರೂ.ಗೆ ತಲುಪಿದೆ. ಇದೇ ವೇಳೆ ಡೀಸೆಲ್ ದರ 3.12 ರೂ. ಹೆಚ್ಚಳವಾಗಿ 94.10 ರೂ. ಆಗಿದೆ. ಈ ಹಿಂದೆ ನಗರದಲ್ಲಿ ಪೆಟ್ರೋಲ್ ದರ 102.90 ರೂ. ಮತ್ತು ಡೀಸೆಲ್ ದರ 90.98 ರೂ. ಇತ್ತು.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 3.29 ರೂ. ಏರಿಕೆಯಾಗಿದ್ದು, ಹೊಸ ದರ 108.74 ರೂ. ಆಗಿದೆ. ಡೀಸೆಲ್ ದರ 95.13 ರೂ.ಗೆ ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ ದರ 3.14 ರೂ. ಹೆಚ್ಚಳವಾಗಿ 106.68 ರೂ. ಆಗಿದ್ದು, ಡೀಸೆಲ್ ದರ 93.14 ರೂ.ಗೆ ಏರಿಕೆಯಾಗಿದೆ.
ಇದೇ ವೇಳೆ ಚೆನ್ನೈನಲ್ಲಿ ಪೆಟ್ರೋಲ್ ದರ 2.83 ರೂ. ಏರಿಕೆಯಾಗಿ 103.67 ರೂ.ಗೆ ತಲುಪಿದೆ. ಡೀಸೆಲ್ ದರವೂ 2.86 ರೂ. ಹೆಚ್ಚಳವಾಗಿ 95.25 ರೂ. ಆಗಿದೆ.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.



