ಇಂಡಿಯನ್ ಪ್ರೀಮಿಯರ್ ಲೀಗ್‌ನ 63ನೇ ಪಂದ್ಯ ಇಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇಆಫ್ ಪ್ರವೇಶದ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವ ಪಡೆದಿದೆ.
ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ತವರಿನಲ್ಲಿ ಗೆಲುವು ಸಾಧಿಸುವ ಒತ್ತಡ ಎದುರಾಗಿದೆ. 12 ಪಂದ್ಯಗಳಲ್ಲಿ 6 ಜಯಗಳೊಂದಿಗೆ 12 ಅಂಕ ಪಡೆದಿರುವ CSK ಪ್ರಸ್ತುತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್ ಆಸೆ ಜೀವಂತವಾಗಿರಿಸಲು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಒಂದು ವೇಳೆ ಚೆನ್ನೈ ಈ ಪಂದ್ಯದಲ್ಲಿ ಸೋತರೆ ಮುಂದಿನ ಹಂತ ಪ್ರವೇಶಿಸುವ ಹಾದಿ ಅತ್ಯಂತ ಕಠಿಣವಾಗಲಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡ ಮುಂದಿನ ಪಂದ್ಯದಲ್ಲೂ ಸೋತರೆ 13 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಅಲ್ಲದೆ ರಾಜಸ್ಥಾನ್ ರಾಯಲ್ಸ್ ಉಳಿದಿರುವ ಎರಡೂ ಪಂದ್ಯಗಳಲ್ಲಿ ಸೋಲಬೇಕಾದ ಪರಿಸ್ಥಿತಿಯೂ ಸಿಎಸ್ಕೆಗೆ ಅನುಕೂಲಕರವಾಗಬಹುದು. ಈ ಎಲ್ಲ ಲೆಕ್ಕಾಚಾರಗಳ ನಡುವೆ ಚೆನ್ನೈ ತಂಡ ಭಾರೀ ಒತ್ತಡದೊಂದಿಗೆ ಕಣಕ್ಕಿಳಿಯುತ್ತಿದೆ.
ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೂ ಗೆಲುವು ಅಗತ್ಯವಾಗಿದೆ. ಬಾಕಿ ಇರುವ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದರಲ್ಲಿ ಜಯ ಸಾಧಿಸಬೇಕಾದ ಅನಿವಾರ್ಯತೆ ಹೈದರಾಬಾದ್ ಎದುರಿಸಿದೆ.
ಪಿಚ್ ರಿಪೋರ್ಟ್
ಚೆನ್ನೈನ ಎಂ.ಎ. ಚಿದಂಬರಂ ಮೈದಾನದ ಪಿಚ್ ಸಾಮಾನ್ಯವಾಗಿ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 180 ರಿಂದ 200 ರನ್‌ಗಳ ಗಡಿ ದಾಟಿದರೆ ಮಾತ್ರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಸವಾಲು ಎದುರಾಗಬಹುದು. ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಸಿಎಸ್ಕೆ ಸಂಭವನೀಯ ಪ್ಲೇಯಿಂಗ್-11
ಋತುರಾಜ್ ಗಾಯಕ್ವಾಡ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್, ನೂರ್ ಅಹ್ಮದ್, ಮುಖೇಶ್ ಚೌಧರಿ.
ಹೈದರಾಬಾದ್ ಸಂಭವನೀಯ ಪ್ಲೇಯಿಂಗ್-11
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಆರ್. ಸ್ಮರನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಹರ್ಷ್ ದುಬೆ, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್.



