ಮೈಸೂರು: ಪ್ರಕೃತಿ ಪ್ರೇಮಿಗಳು ಮತ್ತು ವನ್ಯಜೀವಿ ಆಸಕ್ತರಿಗೆ ಖುಷಿ ನೀಡುವ ಬೆಳವಣಿಗೆಯೊಂದು ರಾಜ್ಯದ ಅರಣ್ಯ ವಲಯದಲ್ಲಿ ಗಮನ ಸೆಳೆದಿದೆ.
ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆಯ ಕಠಿಣ ಸುರಕ್ಷತಾ ಕ್ರಮಗಳು, ಅರಣ್ಯ ಸಂರಕ್ಷಣೆ ಹಾಗೂ ಪೂರಕ ಪರಿಸರ ವ್ಯವಸ್ಥೆಯ ಪರಿಣಾಮವಾಗಿ ರಾಜ್ಯದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳ ದರ್ಶನವೂ ಹೆಚ್ಚಾಗಿ ಸಿಗತೊಡಗಿದೆ.
ಇತ್ತೀಚೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಪರೂಪದ ಮತ್ತು ರೋಮಾಂಚನಕಾರಿ ದೃಶ್ಯವೊಂದು ಕಣ್ಮನ ಸೆಳೆದಿದೆ. ಅರಣ್ಯದ ಹಸಿರು ವಾತಾವರಣದ ಮಧ್ಯೆ ಎರಡು ಭಾರೀ ಗಾತ್ರದ ಹುಲಿಗಳು ರಾಜಗಾಂಭೀರ್ಯದಿಂದ ವಿಹರಿಸುತ್ತಿದ್ದ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.
ಸಫಾರಿ ವಾಹನ ಸಮೀಪದಲ್ಲಿದ್ದರೂ ಯಾವುದೇ ಆತಂಕವಿಲ್ಲದೆ ಈ ಜೋಡಿ ಹುಲಿಗಳು ನಿಧಾನವಾಗಿ ಹೆಜ್ಜೆ ಹಾಕುತ್ತಾ ಕ್ಯಾಮೆರಾಗಳಿಗೆ ಬಿಂದಾಸ್ ಪೋಸ್ ನೀಡಿವೆ. ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಹುಲಿಗಳ ದರ್ಶನ ಸಿಗುವುದೇ ಅಪರೂಪ. ಅದರಲ್ಲೂ ಒಂದೇ ವೇಳೆ ಎರಡು ಹುಲಿಗಳು ಹತ್ತಿರದಿಂದ ಕಾಣಿಸಿಕೊಂಡು ಕೆಲಕಾಲ ಅರಣ್ಯ ಪ್ರದೇಶದಲ್ಲೇ ಸಂಚರಿಸಿದ್ದರಿಂದ ಪ್ರವಾಸಿಗರ ಸಂತಸಕ್ಕೆ ಪಾರವೇ ಇರಲಿಲ್ಲ.
ಸಫಾರಿಯಲ್ಲಿ ಭಾಗವಹಿಸಿದ್ದ ಹಲವರು ತಮ್ಮ ಮೊಬೈಲ್ ಹಾಗೂ ವೃತ್ತಿಪರ ಕ್ಯಾಮೆರಾಗಳಲ್ಲಿ ಈ ಅಪರೂಪದ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ಇದೀಗ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ವನ್ಯಜೀವಿ ಪ್ರೇಮಿಗಳ ಗಮನ ಸೆಳೆಯುತ್ತಿವೆ.
ಇನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಪ್ರವಾಸೋದ್ಯಮಕ್ಕೂ ಹೊಸ ಉತ್ತೇಜನ ನೀಡಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯದ ಅರಣ್ಯ ಪ್ರವಾಸೋದ್ಯಮಕ್ಕೆ ಇದು ಮತ್ತಷ್ಟು ಬಲ ತುಂಬುತ್ತಿದೆ.



