ಬಾಕ್ಸ್ ಆಫೀಸ್ನಲ್ಲಿ ‘ಕರುಪ್ಪು’ ಸಿನಿಮಾ ಸೃಷ್ಟಿಸಿರುವ ದಾಖಲೆಗಳ ನಡುವೆಯೇ ನಟ ಸೂರ್ಯ ಅವರ ಮತ್ತೊಂದು ನಡೆ ಈಗ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡ ಚಿತ್ರದ ಯಶಸ್ಸಿಗೆ ಕಾರಣರಾದ ಇಬ್ಬರು ಪ್ರಮುಖ ತಂತ್ರಜ್ಞರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಸೂರ್ಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಹಿನ್ನಡೆ ಅನುಭವಿಸಿದ್ದ ಸೂರ್ಯಗೆ ‘ಕರುಪ್ಪು’ ಸಿನಿಮಾ ಮಹತ್ವದ ತಿರುವು ನೀಡಿದೆ. ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ಚಿತ್ರ, ಮೂರನೇ ವಾರದಲ್ಲೇ 300 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿದೆ.
ಈ ಯಶಸ್ಸಿನ ಬೆನ್ನಲ್ಲೇ ಚಿತ್ರದ ಛಾಯಾಗ್ರಾಹಕ ಜಿ.ಕೆ. ವಿಷ್ಣು ಅವರಿಗೆ ‘ಮಹೀಂದ್ರಾ BE6 ಬ್ಯಾಟ್ಮ್ಯಾನ್ ಎಡಿಷನ್’ ಕಾರು ಹಾಗೂ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರಿಗೆ ಮತ್ತೊಂದು ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.
ಚಿತ್ರದ ಯಶಸ್ಸಿನ ಬಳಿಕ ಮಾತನಾಡಿದ್ದ ಸೂರ್ಯ, ಎಡಿಟರ್ ಕಲೈವಾನನ್, ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್, ಛಾಯಾಗ್ರಾಹಕ ಜಿ.ಕೆ. ವಿಷ್ಣು ಸೇರಿದಂತೆ ಇಡೀ ತಾಂತ್ರಿಕ ತಂಡದ ಶ್ರಮವೇ ಚಿತ್ರದ ಗೆಲುವಿನ ಮೂಲ ಕಾರಣ ಎಂದು ಹೇಳಿದ್ದರು. ಈಗ ಮಾತಿನಲ್ಲಷ್ಟೇ ಅಲ್ಲ, ಉಡುಗೊರೆಯ ಮೂಲಕವೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಿರುವ ‘ಕರುಪ್ಪು’ ಚಿತ್ರವನ್ನು ಆರ್.ಜೆ. ಬಾಲಾಜಿ ನಿರ್ದೇಶಿಸಿದ್ದು, ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರದಲ್ಲಿನ ಸೂರ್ಯ ಅವರ ‘ಕರುಪ್ಪುಸಾಮಿ’ ಪಾತ್ರ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದಿದೆ.



