ಬೈಂದೂರು: ಕುಟುಂಬ ಪ್ರವಾಸದ ಸಂಭ್ರಮ ಕೆಲವೇ ನಿಮಿಷಗಳಲ್ಲಿ ಶೋಕವಾಗಿ ಬದಲಾಗಿದೆ. ಮುರುಡೇಶ್ವರ ಪ್ರವಾಸ ಮುಗಿಸಿ ವಿಶ್ರಾಂತಿಗಾಗಿ ನಿಂತಿದ್ದ ವೇಳೆ ಹೊಳೆಗೆ ಸ್ನಾನಕ್ಕೆ ಇಳಿದ 16 ವರ್ಷದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಸಂಕದಗುಂಡಿ ಹೊಳೆಯಲ್ಲಿ ನಡೆದಿದೆ.
ಹಾವೇರಿ ಮೂಲದ ಆಯುಷ್ ಮೃತ ದುರ್ದೈವಿ. ಕುಟುಂಬದ ಏಳು ಮಂದಿ ಮುರುಡೇಶ್ವರ ಹಾಗೂ ಕನ್ಯಾಕುಮಾರಿ ಪ್ರವಾಸದಲ್ಲಿದ್ದು, ಶಿರೂರು ಸಮೀಪ ವಾಹನ ನಿಲ್ಲಿಸಿ ಊಟದ ವ್ಯವಸ್ಥೆ ಮಾಡುತ್ತಿದ್ದರು.
ಈ ವೇಳೆ ಆಯುಷ್ ಹಾಗೂ ಮತ್ತೊಬ್ಬ ಬಾಲಕ ಸಮೀಪದ ಹೊಳೆಗೆ ತೆರಳಿದ್ದಾರೆ. ಆರಂಭದಲ್ಲಿ ಸಾಮಾನ್ಯವಾಗಿ ಸ್ನಾನ ಮಾಡುತ್ತಿದ್ದ ಬಾಲಕ, ಬಳಿಕ ನೀರಿನ ಆಳ ಹೆಚ್ಚಿರುವ ಪ್ರದೇಶಕ್ಕೆ ತೆರಳಿದ್ದಾನೆ. ಆಳದ ಅಂದಾಜು ಸಿಗದ ಕಾರಣ ಕ್ಷಣಾರ್ಧದಲ್ಲಿ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಜೊತೆಯಲ್ಲಿದ್ದ ಬಾಲಕ ಆತಂಕದಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಕೂಡಲೇ ರಕ್ಷಣಾ ಕಾರ್ಯ ಆರಂಭಿಸಲಾಯಿತು. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ.
ಗುಜರಾತ್‌ನಲ್ಲಿ ವಾಸವಿದ್ದ ಆಯುಷ್ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದು, ಕುಟುಂಬದೊಂದಿಗೆ ರಜೆ ಪ್ರವಾಸಕ್ಕೆ ಬಂದಿದ್ದ. ಪ್ರವಾಸದ ಖುಷಿಯ ನಡುವೆ ನಡೆದ ಈ ದುರಂತ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



