ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಸಂಜೆ 4.05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದ ವಿಶೇಷವೆಂದರೆ ವಿವಿಧ ಧರ್ಮಗಳ ಸ್ವಾಮೀಜಿಗಳು, ಮಠಾಧೀಶರು, ಫಾದರ್‌ಗಳು ಹಾಗೂ ಮೌಲ್ವಿಗಳ ಸಮ್ಮುಖದಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ವಧರ್ಮ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಯೊಬ್ಬರು ಪ್ರಮಾಣವಚನ ಸ್ವೀಕರಿಸುತ್ತಿರುವುದು ವಿಶೇಷವಾಗಿದೆ. ಈ ಮೂಲಕ ಸರ್ವಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ, ಶಾಂತಿ ಹಾಗೂ ಸೌಹಾರ್ದತೆಯ ಸಂದೇಶವನ್ನು ರಾಜ್ಯದ ಜನತೆಗೆ ನೀಡುವ ಉದ್ದೇಶವನ್ನು ಡಿಕೆ ಶಿವಕುಮಾರ್ ಹೊಂದಿದ್ದಾರೆ ಎನ್ನಲಾಗಿದೆ.
ಪ್ರಮಾಣವಚನ ಸಮಾರಂಭಕ್ಕೆ ವಿವಿಧ ಜಾತಿ, ಧರ್ಮ ಹಾಗೂ ಸಮುದಾಯಗಳನ್ನು ಪ್ರತಿನಿಧಿಸುವ ಸುಮಾರು 55ಕ್ಕೂ ಹೆಚ್ಚು ಧರ್ಮಗುರುಗಳನ್ನು ಆಹ್ವಾನಿಸಲು ಸೂಚನೆ ನೀಡಲಾಗಿದೆ. ಸ್ವಾಮೀಜಿಗಳು, ಫಾದರ್‌ಗಳು, ಮೌಲ್ವಿಗಳು ಹಾಗೂ ವಿವಿಧ ಮಠಗಳ ಮುಖ್ಯಸ್ಥರಿಗೆ ಸರ್ಕಾರದ ವತಿಯಿಂದಲೇ ಅಧಿಕೃತ ಆಹ್ವಾನ ಪತ್ರ ಕಳುಹಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಈ ಸಂಬಂಧ ಶಿಷ್ಟಾಚಾರ ವಿಭಾಗವು ಡಿಕೆ ಶಿವಕುಮಾರ್ ಕಚೇರಿಯಿಂದ ಧರ್ಮಗುರುಗಳ ಪಟ್ಟಿಯನ್ನು ಪಡೆದುಕೊಂಡಿದೆ.
ಇನ್ನೊಂದೆಡೆ, ಜ್ಯೋತಿಷ್ಯ ಹಾಗೂ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡುವ ಡಿಕೆ ಶಿವಕುಮಾರ್, ಧರ್ಮಗುರುಗಳು ಸೂಚಿಸಿರುವ ಶುಭ ದಿನ ಮತ್ತು ಮುಹೂರ್ತದ ಅನ್ವಯವೇ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ. ಅದರಂತೆ ಅವರು ಪೂರ್ವಾಭಿಮುಖವಾಗಿ ನಿಂತು ಪ್ರಮಾಣವಚನ ಸ್ವೀಕರಿಸಲಿದ್ದು, ಗಾಜಿನ ಮನೆಯಲ್ಲಿ ಅದಕ್ಕೆ ಅನುಗುಣವಾಗಿ ವೇದಿಕೆ ಸಿದ್ಧಪಡಿಸಲಾಗಿದೆ.
ಲೋಕಭವನದ ಗಾಜಿನ ಮನೆಯಲ್ಲಿ ಸುಮಾರು 1,100 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಧರ್ಮಗುರುಗಳು, ನ್ಯಾಯಾಧೀಶರು, ವಿಶೇಷ ಆಹ್ವಾನಿತರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಹಾಗೂ ಗಣ್ಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ನೂತನ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭವನ್ನು ವಿಭಿನ್ನ ಹಾಗೂ ಸರ್ವಧರ್ಮ ಸಮನ್ವಯದ ಸಂಕೇತವಾಗಿ ರೂಪಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಕಾರ್ಯಕ್ರಮ ರಾಜ್ಯ ರಾಜಕೀಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.



