ಬೆಂಗಳೂರು: ರಾಜ್ಯದ ನೂತನ ಸರ್ಕಾರದ ರಚನೆಗೆ ವೇಗ ಸಿಕ್ಕಿರುವ ನಡುವೆ, ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ ಅವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಡಿಸಿಎಂ ಹುದ್ದೆಯ ಕುತೂಹಲಕ್ಕೆ ಅಧಿಕೃತ ತೆರೆ ಬಿದ್ದಿದೆ.
ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾ. ಜಿ. ಪರಮೇಶ್ವರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ವೇಳೆ ಪರಮೇಶ್ವರ್ ಅವರು ಭಾರತದ ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಹೆಸರಿನಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕಾರದ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಮೇಶ್ವರ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಶಾಸಕರು, ವಿವಿಧ ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದು, ಪರಮೇಶ್ವರ್ ಅವರ ಪ್ರಮಾಣವಚನಕ್ಕೆ ಸಾಕ್ಷಿಯಾದರು.
ಸಂಪುಟ ರಚನೆ ಪ್ರಕ್ರಿಯೆ ಆರಂಭವಾದ ದಿನದಿಂದಲೇ ಉಪಮುಖ್ಯಮಂತ್ರಿ ಸ್ಥಾನ ಯಾರ ಪಾಲಾಗಲಿದೆ ಎಂಬ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ಅಂತಿಮವಾಗಿ ಪಕ್ಷದ ಹಿರಿಯ ನಾಯಕ ಹಾಗೂ ಅನುಭವಿ ರಾಜಕಾರಣಿ ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ.



