ಬೆಂಗಳೂರು: ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಚರ್ಚೆಯಲ್ಲಿರುವ ನಡುವೆಯೇ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಖಾತೆ ಹಂಚಿಕೆ ವಿಚಾರದಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಂದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಸೀನಿಯಾರಿಟಿಗೆ ತಕ್ಕ ಗೌರವ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದೇ ಪರಿಸ್ಥಿತಿ ಮುಂದುವರಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗಂಭೀರ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿರ್ವಹಿಸುತ್ತಿರುವ ತಮಗೆ ಮತ್ತೆ ಅದೇ ಖಾತೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಮುನಿಯಪ್ಪ, ತಾವು ಎಂಟು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಹಿರಿಯ ನಾಯಕನಾಗಿದ್ದರೂ ಖಾತೆ ಹಂಚಿಕೆಯಲ್ಲಿ ತಮ್ಮ ಅನುಭವ ಮತ್ತು ಸೀನಿಯಾರಿಟಿಯನ್ನು ಪರಿಗಣಿಸಲಾಗಿಲ್ಲ ಎಂದು ಹೇಳಿದರು.
“ಸಚಿವ ಸಂಪುಟದಲ್ಲಿ ಪ್ರೊಟೊಕಾಲ್ ಮತ್ತು ಅನುಭವದ ಆಧಾರದ ಮೇಲೆ ಖಾತೆಗಳನ್ನು ಹಂಚಿಕೆ ಮಾಡಬೇಕಿತ್ತು. ಸಮಾಜ ಕಲ್ಯಾಣ, ಕೃಷಿ ಅಥವಾ ಜನಸೇವೆಗೆ ನೇರವಾಗಿ ಸಂಬಂಧಿಸಿದ ಪ್ರಮುಖ ಇಲಾಖೆಯನ್ನು ನೀಡುವಂತೆ ನಾನು ಮೊದಲೇ ಮನವಿ ಮಾಡಿದ್ದೆ. ಆದರೆ ಖಾತೆ ಹಂಚಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿಲ್ಲ” ಎಂದು ಅವರು ಹೇಳಿದರು.
ಪಕ್ಷದ ನಾಯಕತ್ವದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಪಕ್ಷದಲ್ಲಿ ತಾಯಿಯ ಸ್ಥಾನದಲ್ಲಿರುವ ನಾಯಕತ್ವ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಈ ವಿಚಾರವನ್ನು ನಾನು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದೇನೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ನನ್ನ ಖಾತೆಯನ್ನು ಬದಲಾಯಿಸುವ ಬಗ್ಗೆ ನಾಯಕತ್ವ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
ಇದೇ ವೇಳೆ ಸಮಾಜ ಕಲ್ಯಾಣ, ಕೃಷಿ ಅಥವಾ ನೀರಾವರಿ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನೀಡಿದರೆ ಜನಸೇವೆ ಮತ್ತು ರೈತರ ಪರ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.



