ಮಂಡ್ಯ: ಮಂಡ್ಯ ರಾಜಕೀಯದಲ್ಲಿ ಮತ್ತೆ ಸುಮಲತಾ ಅಂಬರೀಶ್ ಹೆಸರು ಸದ್ದು ಮಾಡತೊಡಗಿದೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಅವರು, ಇದೀಗ ರಾಜ್ಯಸಭೆ ಪ್ರವೇಶದ ಗುರಿಯೊಂದಿಗೆ ಬಿಜೆಪಿ ನಾಯಕತ್ವದ ಮೇಲೆ ಒತ್ತಡ ಹೆಚ್ಚಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಹಿತದೃಷ್ಟಿಯಿಂದ ಮಂಡ್ಯ ಕ್ಷೇತ್ರವನ್ನು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದ ಸುಮಲತಾ, ಅದಕ್ಕೆ ಪ್ರತಿಯಾಗಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕಿತ್ತು ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಆದರೆ ಚುನಾವಣೆ ಬಳಿಕ ಪಕ್ಷದಿಂದ ನಿರೀಕ್ಷಿತ ಗೌರವ ಸಿಕ್ಕಿಲ್ಲ ಎಂಬ ಅಸಮಾಧಾನ ಅವರ ಆಪ್ತ ವಲಯದಲ್ಲಿ ಕಾಡುತ್ತಿದೆ. ಇದೇ ಕಾರಣಕ್ಕೆ ರಾಜ್ಯಸಭೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್‌ಗೆ ಒತ್ತಡ ಹೇರುವ ಕೆಲಸ ಆರಂಭವಾಗಿದೆ.
ಸುಮಲತಾ ಬೆಂಬಲಿಗರು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ರಾಜ್ಯಸಭೆ ಸ್ಥಾನಕ್ಕೆ ಅವರ ಹೆಸರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಕೀಯವಾಗಿ ಮತ್ತೆ ತಮ್ಮ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಮುಂದಾಗಿರುವ ಸುಮಲತಾ, ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ಬಿಜೆಪಿ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.



