ಮೈಸೂರು: ಭಾರತೀಯ ಅಂಡರ್-19 ಕ್ರಿಕೆಟ್ ತಂಡದ ನಾಯಕ ಆಯುಷ್ ಮಾತ್ರೆ ಅವರು ಮೈಸೂರಿಗೆ ಭೇಟಿ ನೀಡಿ ಅವಧೂತ ಶ್ರೀ ಅರ್ಜುನ ಗುರೂಜಿ ಅವರ ಆಶೀರ್ವಾದ ಪಡೆದಿದ್ದಾರೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಗುರು ನಿವಾಸಕ್ಕೆ ಆಗಮಿಸಿದ ಅವರು, ಗುರೂಜಿಗಳೊಂದಿಗೆ ಸಮಯ ಕಳೆಯುವ ಮೂಲಕ ಆಶೀರ್ವಾದ ಸ್ವೀಕರಿಸಿದರು.
ಇದರ ಬೆನ್ನಲ್ಲೇ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ನಡೆದ ಲಲಿತಾ ಪರಮೇಶ್ವರಿ ಅಮ್ಮನವರ ಹರಿದ್ರಾ ಅರ್ಚನೆ ಕಾರ್ಯಕ್ರಮದಲ್ಲೂ ಭಾಗವಹಿಸಿದ ಆಯುಷ್ ಮಾತ್ರೆ, ವಿಶೇಷ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು.
ಕ್ರಿಕೆಟ್ ವಲಯದಲ್ಲಿ ಈಗಾಗಲೇ ತನ್ನದೇ ಛಾಪು ಮೂಡಿಸಿರುವ ಆಯುಷ್ ಮಾತ್ರೆ, ಏಷ್ಯಾಕಪ್ ಹಾಗೂ ದೇಶೀಯ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇರಾನಿ ಕಪ್ನಲ್ಲಿ ಸಿಡಿಸಿದ 176 ರನ್ಗಳ ಅದ್ಭುತ ಇನ್ನಿಂಗ್ಸ್ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅವಕಾಶ ಪಡೆದಿದ್ದ ಯುವ ಬ್ಯಾಟರ್, ತನ್ನ ಆಕ್ರಮಣಕಾರಿ ಆಟದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಕ್ರೀಡಾ ಸಾಧನೆಗಳ ನಡುವೆಯೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆಯುಷ್ ಮಾತ್ರೆ ಅವರ ಭೇಟಿ ಇದೀಗ ಚರ್ಚೆಗೆ ಗ್ರಾಸವಾಗಿದೆ.



