ವಿಜಯಸಾಕ್ಷಿ ಸುದ್ದಿ, ಹೊಳೆಆಲೂರು: ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಹಾಗೂ ಪರಿಸರ ಮಾಲಿನ್ಯದಂತಹ ಸವಾಲುಗಳ ನಡುವೆ ಪರಿಸರ ಸಂರಕ್ಷಣೆಯ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿಯೊಬ್ಬ ನಾಗರಿಕನು ತನ್ನ ಮನೆಯ ಸುತ್ತಮುತ್ತ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ರೋಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೋಣ ತಾಲೂಕಿನ ಕೌಶಲ್ಯ ಉದ್ಯಮಶೀಲತೆ ಜೀವನೋಪಾಯ ಸಂಜೀವಿನಿ ಮಹಿಳಾ ಸಂಘ, ಹೊಳೆಆಲೂರು ಗ್ರಾಮ ಪಂಚಾಯಿತಿ ಹಾಗೂ ಕಲ್ಲೇಶ್ವರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಇಂದಿನ ಅತ್ಯಂತ ಪ್ರಮುಖ ಅಗತ್ಯವಾಗಿದ್ದು, ಪ್ರಕೃತಿಯೊಂದಿಗೆ ಮಾನವನ ಬದುಕು ಅವಿನಾಭಾವ ಸಂಬಂಧ ಹೊಂದಿದೆ. ಅರಣ್ಯ ನಾಶ, ಜಲಮೂಲಗಳ ಕ್ಷೀಣತೆ ಹಾಗೂ ಮಾಲಿನ್ಯದಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದ್ದು, ಇದನ್ನು ತಡೆಯಲು ಪ್ರತಿಯೊಬ್ಬರೂ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇಂದಿನ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿದರೆ ನಾಳಿನ ಸಮಾಜ ಹಸಿರು ಮತ್ತು ಆರೋಗ್ಯಕರವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛತಾ ಅಭಿಯಾನ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಜಲ ಸಂರಕ್ಷಣೆ, ಹಸಿರು ಗ್ರಾಮ ನಿರ್ಮಾಣ ಸೇರಿದಂತೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಪಿಡಿಒ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಲ್ಲೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
“ಪರಿಸರ ರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಗಿಡ ಬೆಳೆದರೆ ಪರಿಸರ ಸಮತೋಲನ ಸಾಧ್ಯ.”ಚಂದ್ರಶೇಖರ ಬಿ. ಕಂದಕೂರ



