ಬೀದರ್: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಾಲಯ ನಿಗದಿಪಡಿಸಿದ್ದ ಪರಿಹಾರ ಮೊತ್ತವನ್ನು ಪಾವತಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿ ಸಂಸ್ಥೆಯ ಎರಡು ಬಸ್‌ಗಳನ್ನು ನ್ಯಾಯಾಲಯ ಜಪ್ತಿ ಮಾಡಿದೆ.
ಬೀದರ್ ಜಿಲ್ಲೆಯ ಔರಾದ್ ಡಿಪೋಗೆ ಸೇರಿದ ಎರಡು ಬಸ್‌ಗಳ ವಿರುದ್ಧ ಜಪ್ತಿ ಕ್ರಮ ಜರುಗಿದ್ದು, ನ್ಯಾಯಾಲಯದ ಆವರಣದಲ್ಲೇ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕಮಲನಗರ ಸಮೀಪ 2024ರ ಫೆಬ್ರವರಿ 28ರಂದು ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತ ವೀರಭದ್ರ ಅವರ ಪತ್ನಿ ಸುವರ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, 36 ಲಕ್ಷ 63 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕೆಕೆಆರ್‌ಟಿಸಿಗೆ ಆದೇಶಿಸಿತ್ತು.
ಆದರೆ ನ್ಯಾಯಾಲಯದ ನಿರ್ದೇಶನದಂತೆ ಪರಿಹಾರ ಪಾವತಿಯಾಗದ ಕಾರಣ, ಔರಾದ್ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಂಸ್ಥೆಯ ಎರಡು ಬಸ್‌ಗಳನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಈ ಬೆಳವಣಿಗೆ ಸಾರಿಗೆ ಸಂಸ್ಥೆಯಲ್ಲಿ ಚರ್ಚೆಗೆ ಕಾರಣವಾಗಿದೆ.



