ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆನಂದ ಆಶ್ರಮ ರಸ್ತೆಯಲ್ಲಿರುವ ಮುಧೋಳ ಇಂಡಸ್ಟ್ರಿಯಲ್ ಎಸ್ಟೇಟ್ಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದರೆ ರಾಜ್ಯದಲ್ಲೇ ಮಾದರಿ ಕೈಗಾರಿಕಾ ವಲಯವಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಹೇಳಿದರು.
ಬುಧವಾರ ಇಂಡಸ್ಟ್ರಿಯಲ್ ಎಸ್ಟೇಟ್ಗೆ ಭೇಟಿ ನೀಡಿ ಉದ್ಯಮಿದಾರರ ಸಮಸ್ಯೆಗಳನ್ನು ಆಲಿಸಿದ ಅವರು, ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಹಾಗೂ ಉದ್ಯಮಿದಾರರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕೈಗಾರಿಕಾ ವಲಯದಲ್ಲಿ 20ಕ್ಕೂ ಹೆಚ್ಚು ಕೈಗಾರಿಕೆಗಳು ಸಕ್ರಿಯವಾಗಿದ್ದು, 400ಕ್ಕೂ ಹೆಚ್ಚು ಕಾರ್ಮಿಕರಿಗೆ ನೇರ ಉದ್ಯೋಗ ಒದಗಿಸುತ್ತಿವೆ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಈ ವಲಯದ ಕೊಡುಗೆ ಗಮನಾರ್ಹವಾಗಿದೆ ಎಂದು ಅವರು ಹೇಳಿದರು.
ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಸಲ್ಲಿಸಲಾದ ಮನವಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣ ಸ್ಥಳ ಪರಿಶೀಲನೆಗೆ ಸೂಚನೆ ನೀಡಿದ್ದರು. ಅದರಂತೆ ಜಂಟಿ ನಿರ್ದೇಶಕರು ಎಸ್ಟೇಟ್ಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಮಾತನಾಡಿದ ಉದ್ಯಮಿದಾರರು, ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಕೊರತೆ ಕೈಗಾರಿಕೆಗಳ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅಹವಾಲು ಸಲ್ಲಿಸಿದರು.
ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಕೋಲ್ಡ್ ಸ್ಟೋರೇಜ್, ವೇರ್ಹೌಸ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶಗಳಿದ್ದು, ಉದ್ಯಮಿದಾರರು ಒಗ್ಗೂಡಿ ಸಂಘ ರಚಿಸಿಕೊಂಡರೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅನುಕೂಲವಾಗಲಿದೆ ಎಂದು ಪ್ರಶಾಂತ ಬಾರಿಗಿಡದ ಸಲಹೆ ನೀಡಿದರು. ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಜಿಲ್ಲಾಡಳಿತದ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿ, ಉದ್ಯಮಿದಾರರ ಬಹುದಿನಗಳ ಬೇಡಿಕೆಗಳಿಗೆ ಶೀಘ್ರ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ, ಉಪಾಧ್ಯಕ್ಷರಾದ ಸಿದ್ಧರಾಮಪ್ಪ ಉಮಚಗಿ, ಪ್ರಕಾಶ ಉಗಲಾಟದ, ಸಹ ಕಾರ್ಯದರ್ಶಿ ರಾಘವೇಂದ್ರ ಕಾಲವಾಡ ಹಾಗೂ ಉದ್ಯಮಿದಾರರಾದ ಬಸವರಾಜ ಅಂಗಡಿ, ವೀರಣ್ಣ ಕಾಡಪ್ಪನವರ, ಶ್ರೀಕಾಂತ ಅಂಗಡಿ, ಅರುಣ ಮಿಸ್ಕಿನ್, ಅಜ್ಜಣ್ಣ ಉಮಚಗಿ, ಚನ್ನಯ್ಯ ಹಿರೇಮಠ, ಶಿವಾನಂದ ನರಗುಂದ, ಸಂಜಯ ಮಿಸ್ಕಿನ್, ಚಂದ್ರಶೇಖರ ಉಗಲಾಟದ, ಬಸವರಾಜ ಕಾಡಪ್ಪನವರ, ಮಂಜಣ್ಣ ಮಲ್ಲರಡ್ಡಿ, ಗಂಗಾಧರ ನವಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸ್ಥಳ ಪರಿಶೀಲನೆ ನಡೆಸಿ ಉದ್ಯಮಿದಾರರ ಸಮಸ್ಯೆಗಳನ್ನು ಆಲಿಸಲಾಗಿದೆ. ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ವರದಿ ಆಧರಿಸಿ ಉದ್ಯಮಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
ಪ್ರಶಾಂತ ಬಾರಿಗಿಡದ, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ



