HomeGadag Newsಹೆಸರು ಬೆಳೆಗೆ ರೋಗದ ಕಾಟ: ರೈತರಲ್ಲಿ ಆತಂಕದ ಕಾರ್ಮೋಡ

ಹೆಸರು ಬೆಳೆಗೆ ರೋಗದ ಕಾಟ: ರೈತರಲ್ಲಿ ಆತಂಕದ ಕಾರ್ಮೋಡ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಹೆಸರು ಬೆಳೆಗೆ ಸುರುಳಿಪೂಚಿ (ಎಲೆಮುಟಗಿ), ಎಲೆಚುಕ್ಕಿ ಹಾಗೂ ಹಳದಿ ರೋಗ ಕಾಣಿಸಿಕೊಂಡಿದ್ದು, ತಾಲೂಕಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಬಿತ್ತನೆಯಾಗಿ ಕೇವಲ 20ರಿಂದ 25 ದಿನಗಳಾಗಿರುವ ಬೆಳೆಗೆ ರೋಗಬಾಧೆ ಕಾಣಿಸಿಕೊಂಡಿರುವುದು “ಮೊದಲ ತುತ್ತಿಗೆ ಹಳ್ಳು” ಎಂಬಂತಾಗಿದ್ದು, ರೈತರ ನಿರೀಕ್ಷೆಗಳಿಗೆ ತಣ್ಣೀರು ಎರಚಿದಂತಾಗಿದೆ.

ಎಲ್‌ನೀನೋ ಪರಿಣಾಮದಿಂದ ಈ ಬಾರಿ ಮುಂಗಾರು ಮಳೆ ಕೊರತೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ಮುನ್ಸೂಚನೆಯ ಹಿನ್ನೆಲೆಯಲ್ಲಿ ರೈತರು ಮೇ ಮೂರನೇ ಹಾಗೂ ನಾಲ್ಕನೇ ವಾರದಲ್ಲಿಯೇ ಹೆಸರು ಬಿತ್ತನೆ ಮಾಡಿದ್ದರು. ಆದರೆ ಇದೀಗ ಮಳೆಯ ಕೊರತೆಯ ಜೊತೆಗೆ ರೋಗಬಾಧೆ ಕಾಣಿಸಿಕೊಂಡಿರುವುದು ರೈತರನ್ನು ಕಂಗಾಲಾಗಿಸಿದೆ.

ಕಳೆದ ವರ್ಷವೂ ರೋಗಬಾಧೆಯಿಂದ ಹೆಸರು ಬೆಳೆ ನಷ್ಟವಾಗಿದ್ದ ಹಿನ್ನೆಲೆಯಲ್ಲಿ ರೈತರು ಈ ಬಾರಿ ಹೆಚ್ಚಿನ ಬೆಲೆ ನೀಡಿ ಅಣ್ಣಿಗೇರಿ, ನವಲಗುಂದ ಹಾಗೂ ನರಗುಂದ ಭಾಗಗಳಿಂದ ಪ್ರತಿ ಕೆ.ಜಿ.ಗೆ ಸುಮಾರು ₹160 ದರದಲ್ಲಿ ಗುಣಮಟ್ಟದ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಕೇಂದ್ರ ಸರ್ಕಾರ ಹೆಸರು ಬೆಳೆಗೆ ಬೆಂಬಲ ಬೆಲೆ ಘೋಷಿಸಿರುವುದು ಹಾಗೂ ಕಡಿಮೆ ಮಳೆಯಲ್ಲಿಯೂ ಉತ್ತಮ ಇಳುವರಿ ನಿರೀಕ್ಷೆಯಿಂದ ಈ ಬಾರಿ ತಾಲೂಕಿನಲ್ಲಿ ಸುಮಾರು 5,100 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ.

ಲಕ್ಷ್ಮೇಶ್ವರ, ಶಿಗ್ಲಿ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ರಾಮಗೇರಿ ಹಾಗೂ ಬಸಾಪುರ ಭಾಗಗಳ ಕಪ್ಪು ಮಣ್ಣಿನ ಜಮೀನುಗಳಲ್ಲಿ ವ್ಯಾಪಕವಾಗಿ ಹೆಸರು ಬೆಳೆದಿದ್ದು, ಇದೀಗ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ರೋಗಬಾಧಿತ ಕ್ಷೇತ್ರಕ್ಕೆ ಕೃಷಿ ಇಲಾಖೆ ಭೇಟಿ

ಸೊರಟೂರು ಗ್ರಾಮದ ರೈತ ಮಹಾಂತೇಶ ಸೊರಟೂರು ಅವರ ಜಮೀನಿಗೆ ಭೇಟಿ ನೀಡಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ರೋಗಬಾಧಿತ ಬೆಳೆಯನ್ನು ಪರಿಶೀಲಿಸಿ ರೈತರಿಗೆ ಅಗತ್ಯ ಸಲಹೆ ನೀಡಿದರು.

ಈ ಕುರಿತು ಮಾತನಾಡಿದ ಅವರು, ಮುಂಗಾರು ಪೂರ್ವ ಮಳೆಯ ಹಿನ್ನೆಲೆಯಲ್ಲಿ ಅನೇಕ ರೈತರು ಅವಧಿಗೂ ಮುನ್ನ ಬಿತ್ತನೆ ಮಾಡಿದ್ದು, ಇಂತಹ ಬೆಳೆಗಳಲ್ಲಿ ರೋಗಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ರೈತರಿಗೆ ಕೃಷಿ ಇಲಾಖೆಯ ಸಲಹೆ

ರೋಗಬಾಧೆ ಕಂಡುಬಂದ ತಕ್ಷಣ ರೈತರು ಸೂಕ್ತ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. 15 ಲೀಟರ್ ನೀರಿಗೆ 15 ಎಂಎಲ್ ಅಫಿಡೋಪೈರೋಪೆನ್ ಅಥವಾ 6 ಎಂಎಲ್ ಥಯಾಮೆಥೋಕ್ಸಾಮ್, ಅಥವಾ 10 ಗ್ರಾಂ ಡಿಯಾಫೆಂಥಿಯೋರಾನ್, ಅಥವಾ 5 ಎಂಎಲ್ ಇಮಿಡಾಕ್ಲೋಪ್ರಿಡ್ ಜೊತೆಗೆ 6 ಗ್ರಾಂ ಅಸಿಟಮಾಪ್ರಿಡ್ ಬೆರೆಸಿ ಸಿಂಪಡಣೆ ಮಾಡುವುದು ಪರಿಣಾಮಕಾರಿ ಎಂದು ತಿಳಿಸಿದರು.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ವಾರ ಮಳೆಯ ಸಾಧ್ಯತೆ ಕಡಿಮೆ ಇರುವುದರಿಂದ ತೇವಾಂಶ ಕೊರತೆ ಇದ್ದರೆ ಬಿತ್ತನೆ ಮುಂದೂಡುವುದು ಉತ್ತಮ. ರೈತರು ಬೆಳೆದರ್ಶಕ ಆ್ಯಪ್‌ನಲ್ಲಿ ಬೆಳೆ ನೋಂದಣಿ ಮಾಡಿಸಿಕೊಳ್ಳುವುದರಿಂದ ಬೆಳೆವಿಮೆ, ಬೆಳೆಹಾನಿ ಪರಿಹಾರ ಹಾಗೂ ಬೆಂಬಲ ಬೆಲೆ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತರಾದ ಚನ್ನಪ್ಪ ಷಣ್ಮುಕಿ, ದ್ಯಾಮಣ್ಣ ಮೋದಿ, ಮಲ್ಲಪ್ಪ ಕಲ್ಲೂರ, ಮಲ್ಲಪ್ಪ ಸೊರಟೂರು, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಪಿ.ಕೆ. ಹೊನ್ನಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಕಳೆದ ವರ್ಷ ಮಳೆಯಿಂದ ಬೆಳೆ ಹಾನಿಯಾಗಿತ್ತು. ಈ ವರ್ಷ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದೇವೆ. ಈಗ ಆರಂಭದಲ್ಲೇ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕ ಹೆಚ್ಚಿಸಿದೆ.”

ಚನ್ನಪ್ಪ ಷಣ್ಮುಕಿ ಹಾಗೂ ಮಲ್ಲಪ್ಪ ಸೊರಟೂರು, ರೈತರು


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!