ವಿಜಯಸಾಕ್ಷಿ ಸುದ್ದಿ, ಗದಗ: ಛತ್ತೀಸ್‌ಗಢ ರಾಜ್ಯದ ಶಾಲಾ ಶಿಕ್ಷಣ, ಗ್ರಾಮೋದ್ಯಮ, ಕಾನೂನು ಹಾಗೂ ಶಾಸನ ವ್ಯವಹಾರಗಳ ಸಚಿವ ಗಜೆಂದ್ರ ಯಾದವ್ ಅವರು ಗುರುವಾರ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಪುರಾತನ ದೇವಾಲಯಗಳು ಹಾಗೂ ಪಾರಂಪರಿಕ ಸ್ಮಾರಕಗಳನ್ನು ವೀಕ್ಷಿಸಿದರು.
ಲಕ್ಕುಂಡಿಯ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ದೇಶದ ಅಪರೂಪದ ಪರಂಪರೆ ತಾಣಗಳಲ್ಲಿ ಒಂದಾಗಿದ್ದು, ಭಗವಾನ್ ಮಹಾದೇವರ ವಿವಿಧ ಸ್ವರೂಪಗಳನ್ನು ಪ್ರತಿಬಿಂಬಿಸುವ ದೇವಾಲಯಗಳು ಹಾಗೂ ಶಿಲ್ಪಕಲಾ ವೈಭವದಿಂದ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದರು.
11ನೇ ಮತ್ತು 12ನೇ ಶತಮಾನಗಳ ಅಮೂಲ್ಯ ಪಾರಂಪರಿಕ ಸ್ಮಾರಕಗಳನ್ನು ಪುರಾತತ್ವ ಇಲಾಖೆ ಸಂರಕ್ಷಿಸಿ ಉಳಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಐತಿಹಾಸಿಕ ತಾಣಗಳು ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಪ್ರಚಾರ ಪಡೆಯಬೇಕಿದ್ದು, ಈ ಕುರಿತು ಕೇಂದ್ರ ಸರ್ಕಾರದ ಸಂಬಂಧಿತ ಸಚಿವರೊಂದಿಗೆ ಚರ್ಚಿಸಿ ಲಕ್ಕುಂಡಿಯ ಮಹತ್ವವನ್ನು ದೇಶದಾದ್ಯಂತ ಪರಿಚಯಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಲಕ್ಕುಂಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಪರಂಪರೆಯ ಸಂರಕ್ಷಣೆಗಾಗಿ ಜಿಲ್ಲಾಡಳಿತ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಕೈಗೊಂಡಿರುವ ಕಾರ್ಯಗಳನ್ನು ಅವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣ ಗೊಗೇರಿ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಲಕ್ಕುಂಡಿ ದೇಶದ ಅತ್ಯಂತ ವಿಶಿಷ್ಟ ಪರಂಪರೆ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಐತಿಹಾಸಿಕ ಸ್ಮಾರಕಗಳು ಮತ್ತು ಶಿಲ್ಪಕಲಾ ವೈಭವವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಅಗತ್ಯವಿದೆ.”
ಗಜೆಂದ್ರ ಯಾದವ್, ಛತ್ತೀಸ್‌ಗಢ ಸಚಿವರು



