ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳಬೇಕಾದರೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಗ್ರಾಮ ಪಂಚಾಯಿತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಹೇಳಿದರು.
ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮದೇವಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ವತಿಯಿಂದ ಆಯೋಜಿಸಿದ್ದ “ಮಹಿಳೆಯರ ಒಗ್ಗೂಡಿಸುವಿಕೆ ಹಾಗೂ ಗ್ರಾಮದ ಹಿರಿಯರ ಸಭೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1993ರ 73ನೇ ಸಂವಿಧಾನ ತಿದ್ದುಪಡಿಯ ಆಶಯಗಳು ಗ್ರಾಮದ ಬಾಗಿಲಿಗೆ ತಲುಪಬೇಕು. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸಬಲರಾಗಿ ಗ್ರಾಮಾಭಿವೃದ್ಧಿಯ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.
ಗೃಹಲಕ್ಷ್ಮಿ ಯೋಜನೆಯಿಂದ ದೊರೆಯುವ ಹಣದಲ್ಲಿ ಪ್ರತಿ ಮಹಿಳೆಯೂ ₹100 ಉಳಿಸಿ ಗ್ರಾಮದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಬೇಕು. ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳನ್ನು ಉತ್ತೇಜಿಸುವ ಮೂಲಕ ಹಣ ಮತ್ತು ಸಮಯ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು.
ತಿಂಗಳಲ್ಲಿ ಒಂದು ದಿನ ಮಹಿಳೆಯರು, ಹಿರಿಯರು ಹಾಗೂ ಯುವಕರು ಸೇರಿ ಶ್ರಮದಾನ ಮಾಡುವ ಮೂಲಕ ಗ್ರಾಮವನ್ನು ಸ್ವಚ್ಛ ಹಾಗೂ ಮಾದರಿ ಗ್ರಾಮವನ್ನಾಗಿ ರೂಪಿಸಬಹುದು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್. ಜಿನಗಾ ಮಾತನಾಡಿ, ಗ್ರಾಮ ಸಭೆಗಳಲ್ಲಿ ಮಹಿಳೆಯರು ಹಾಗೂ ಹಿರಿಯರು ಕಡ್ಡಾಯವಾಗಿ ಭಾಗವಹಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಜನರ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ಗ್ರಾಮ ಸಭೆಗಳನ್ನು ನಿಯಮಿತವಾಗಿ ನಡೆಸಿ ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಅನುಮೋದನೆಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಲಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವಡ್ಡರ ವಹಿಸಿದ್ದರು.
ಈ ಸಂದರ್ಭದಲ್ಲಿ ಗುರಣ್ಣ ಬಳಗಾನೂರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಕೆ. ಪಾಟೀಲ್, ಪಿಡಿಒ ಅಶ್ವಿನಿ ಕುರುಡಗಿ, ಎಸ್.ಬಿ. ಸತ್ಯಪ್ಪನವರ ಸೇರಿದಂತೆ ನೂರಾರು ಮಹಿಳೆಯರು, ಹಿರಿಯರು, ರೈತರು ಹಾಗೂ ಯುವಕರು ಭಾಗವಹಿಸಿದ್ದರು.
“ಗ್ರಾಮಗಳ ಅಭಿವೃದ್ಧಿಗೆ ಮಹಿಳೆಯರ ಭಾಗವಹಿಸುವಿಕೆ ಅತ್ಯಗತ್ಯ. ಮಹಿಳಾ ಸಬಲೀಕರಣವೇ ಗ್ರಾಮ ಸ್ವರಾಜ್ಯದ ನಿಜವಾದ ಶಕ್ತಿ.”
ಡಿ.ಆರ್. ಪಾಟೀಲ್, ಮಾಜಿ ಶಾಸಕ



