ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮೂರು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಅಪರೂಪದ ದೃಶ್ಯ ನರೇಗಲ್ಲದಲ್ಲಿ ಕಂಡು ಬಂತು. ಗುರುಗಳ ಮೇಲಿನ ಗೌರವ, ಹಳೆಯ ಸ್ನೇಹಿತರ ಮಿಲನ ಹಾಗೂ ಶಾಲಾ ದಿನಗಳ ಸಿಹಿ ನೆನಪುಗಳ ಸಂಭ್ರಮದಿಂದ ‘ಗುರುವಂದನಾ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ನರೇಗಲ್ಲದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1988-89ರಿಂದ 1995-96ರ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ, ಗುರುಗಳ ಮಹತ್ವವನ್ನು ಸ್ಮರಿಸಿ ಭಾವಪೂರ್ಣವಾಗಿ ಮಾತನಾಡಿದರು.
“ತಂದೆ-ತಾಯಿಯ ನಂತರ ಜೀವನಕ್ಕೆ ದಾರಿ ತೋರಿಸುವವರು ಗುರುಗಳು. ಗುರುವಿನ ಗುಲಾಮನಾಗುವ ತನಕ ಮುಕ್ತಿ ಸಿಗುವುದಿಲ್ಲ. ಇಂದು ನಾವು ಸಮಾಜದಲ್ಲಿ ಒಂದು ಸ್ಥಾನ ಪಡೆದಿದ್ದರೆ ಅದಕ್ಕೆ ಗುರುಗಳ ಮಾರ್ಗದರ್ಶನ, ಶಿಸ್ತು ಹಾಗೂ ಅವರು ಬಿತ್ತಿದ ಮೌಲ್ಯಗಳೇ ಕಾರಣ.” ಎಂದು ಎಂ.ಎಸ್. ಧಡೇಸೂರಮಠ ಹೇಳಿದರು.
ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಇಂದಿನ ಮೊಬೈಲ್ ಯುಗದಲ್ಲೂ ಓದುವ ಸಂಸ್ಕೃತಿ ಕಡಿಮೆಯಾಗಬಾರದು. ಪ್ರತಿಯೊಂದು ಮನೆಯಲ್ಲಿ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಸಮಾಜದ ಕನ್ನಡಿಯಾಗಿದ್ದು, ದೇಶ-ವಿದೇಶದ ವಿದ್ಯಮಾನಗಳ ಜೊತೆಗೆ ಕೃಷಿ, ಆರೋಗ್ಯ ಹಾಗೂ ವಿಜ್ಞಾನದ ಮಾಹಿತಿಯನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಅಲ್ಲದೆ, ಯುವಜನತೆ ಗುಟ್ಕಾ, ತಂಬಾಕು ಸೇರಿದಂತೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಡಿಡಿಪಿಐ ಸಂಜೀವ ಬಿಂಗೇರಿ ಮಾತನಾಡುವ ವೇಳೆ ಭಾವುಕರಾದರು.
ಅವರ ಮಾತುಗಳಿಗೆ ಸಭಾಂಗಣ ಕರತಾಡನದಿಂದ ಮೊಳಗಿತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವೀರಪ್ಪ ಸಂಗನಾಳ, ಕುಸುಮವ್ವ ಭೀಮನಗೌಡ್ರ, ಶರಣಬಸಪ್ಪ ಬೂದಿಹಾಳ, ಅಂದಾನಪ್ಪ ಅಣಗೌಡ್ರ, ಎಂ.ಪಿ. ಬಸರೀಗಿಡದ, ನಿಂಗನಗೌಡ ಚಿಕ್ಕನಗೌಡ್ರ, ಬಸವನಗೌಡ ಗೌಡರ, ಗೀತಾ ಗುಜ್ಜಲ ಹಾಗೂ ಮಲ್ಲವ್ವ ಸಕ್ರೋಜಿ ಅವರನ್ನು ‘ಜ್ಞಾನ ದೀಪಗಳು’ ಎಂದು ಗೌರವಿಸಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕೃಷಿಕರಾಗಿರುವ ಹಳೆಯ ವಿದ್ಯಾರ್ಥಿಗಳು ಸಿಂಗರಿಸಿದ ಜೋಡಿ ಎತ್ತುಗಳನ್ನು ಕರೆತಂದು ಕೃಷಿ ಸಂಸ್ಕೃತಿಯ ಮಹತ್ವವನ್ನು ಬಿಂಬಿಸಿದರು. ಬಳಿಕ ಗುರುಗಳಿಗೆ ಪುಷ್ಪವೃಷ್ಟಿ ಮಾಡಿ, ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ದೃಶ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಹಳೆಯ ವಿದ್ಯಾರ್ಥಿಗಳಾದ ವಿರೂಪಾಕ್ಷಪ್ಪ ಸಂಗನಾಳ, ಹುಚ್ಚಪ್ಪ ನರೇಗಲ್ಲ, ವರುಣ ಸಂಗನಾಳ ಹಾಗೂ ಕಾಳಿದಾಸ ಬಡಿಗೇರ ಅವರು ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡು ಹಳೆಯ ದಿನಗಳನ್ನು ಮರುಕಳಿಸಿದರು.
ಹರೀಶ ಬೊಮ್ಮನಹಳ್ಳಿ ಹಾಗೂ ಗೀತಾ ಭೋಪಳಾಪೂರ ಅವರ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಶಿವಕುಮಾರ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಪ್ಪ ಸಂಗನಾಳ ಸ್ವಾಗತಿಸಿದರು. ಸುರೇಶ ಹಳ್ಳಿಕೇರಿ, ಗವಿಸಿದ್ದಯ್ಯ ಹಳ್ಳಿಕೇರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ಮೂವತ್ತು ವರ್ಷಗಳ ಹಿಂದೆ ಮಾಡಿದ ಸೇವೆಯನ್ನು ವಿದ್ಯಾರ್ಥಿಗಳು ಇಂದಿಗೂ ನೆನಪಿಟ್ಟುಕೊಂಡು ಗೌರವಿಸುತ್ತಿರುವುದು ಶಿಕ್ಷಕನ ಜೀವನದ ಅತ್ಯಂತ ದೊಡ್ಡ ಸಂಪತ್ತು. ಇದಕ್ಕಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ.”
ಸಂಜೀವ ಬಿಂಗೇರಿ, ನಿವೃತ್ತ ಡಿಡಿಪಿಐ



