ವಿಜಯಸಾಕ್ಷಿ ಸುದ್ದಿ, ಗದಗ: ವಿದೇಶ ಪ್ರವಾಸ ಕೇವಲ ಪ್ರವಾಸೋದ್ಯಮಕ್ಕೆ ಸೀಮಿತವಾಗದೆ, ಅಲ್ಲಿನ ಉತ್ತಮ ಆಡಳಿತ, ಶಿಸ್ತು, ತಂತ್ರಜ್ಞಾನ ಹಾಗೂ ನಾಗರಿಕ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ಸ್ವದೇಶದಲ್ಲಿ ಜಾರಿಗೊಳಿಸುವ ಪ್ರಯತ್ನಗಳು ನಡೆಯಬೇಕು ಎಂದು ರಾಜ್ಯ ವಿಕೇಂದ್ರೀಕರಣ ಹಾಗೂ ಯೋಜನಾ ಮಂಡಳಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಆಯೋಜಿಸಿದ್ದ ಲೇಖಕಿ ವೀಣಾ ತಿರ್ಲಾಪೂರ ಅವರ ‘ಸೀಮೆಯಾಚೆಗೆ ಒಂದು ಅಮೆರಿಕಾ ಪಯಣ’ ಪ್ರವಾಸ ಕಥನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ವಿದೇಶಗಳಲ್ಲಿ ಕಂಡ ಉತ್ತಮ ವ್ಯವಸ್ಥೆಗಳು, ತಂತ್ರಜ್ಞಾನ ಹಾಗೂ ಅಭಿವೃದ್ಧಿ ಮಾದರಿಗಳನ್ನು ನಮ್ಮ ದೇಶದಲ್ಲೂ ಅಳವಡಿಸಿಕೊಂಡರೆ ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯುತ್ತದೆ ಎಂದು ಡಿ.ಆರ್. ಪಾಟೀಲ ಹೇಳಿದರು.
ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ವಿದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿ, ಅಲ್ಲಿನ ಉತ್ತಮ ಅಂಶಗಳನ್ನು ಇಲಾಖೆಗಳ ಮೂಲಕ ಜಾರಿಗೊಳಿಸುವ ವ್ಯವಸ್ಥೆ ಕಡ್ಡಾಯಗೊಳಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೃತಿ ಪರಿಚಯ ಮಾಡಿದ ಪ್ರಾಧ್ಯಾಪಕ ರಾಮಚಂದ್ರ ಪಡೆಸೂರ ಮಾತನಾಡಿ, ಅಮೆರಿಕದ ವಿವಿಧ ಪ್ರದೇಶಗಳು, ಅಲ್ಲಿನ ಜೀವನ ಶೈಲಿ, ಮೂಲಸೌಕರ್ಯಗಳು, ರಸ್ತೆ ವ್ಯವಸ್ಥೆ ಹಾಗೂ ನಾಗರಿಕ ಶಿಸ್ತು ಕುರಿತ ಸಮಗ್ರ ಚಿತ್ರಣವನ್ನು ಕೃತಿ ಒಳಗೊಂಡಿದೆ ಎಂದು ಹೇಳಿದರು.
“ಪ್ರವಾಸ ಕಥನವು ಕೇವಲ ಪ್ರವಾಸದ ಅನುಭವಗಳ ಸಂಕಲನವಲ್ಲ; ಅದು ಓದುಗರನ್ನು ಹೊಸ ಜಗತ್ತಿನತ್ತ ಕರೆದೊಯ್ಯುವ ಕಿಟಕಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಲೇಖಕಿ ವೀಣಾ ತಿರ್ಲಾಪೂರ ಮಾತನಾಡಿ, ಅಮೆರಿಕದ ಜನರ ಪರಿಸರ ಕಾಳಜಿ ಮತ್ತು ಜೀವ ಸಂಕುಲದ ಮೇಲಿನ ಪ್ರೀತಿ ತಮ್ಮನ್ನು ಹೆಚ್ಚು ಆಕರ್ಷಿಸಿತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರವಾಸ ಕಥನ ಸಾಹಿತ್ಯ ಪ್ರಕಾರದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ಲೇಖಕಿ ತಮ್ಮ ಅನುಭವಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವ ಮೂಲಕ ಓದುಗರಿಗೆ ಹೊಸ ಅನುಭವವನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು.
ಅಲ್ಲಿನ ನಾಗರಿಕ ಶಿಸ್ತು, ನಿಯಮ ಪಾಲನೆ ಹಾಗೂ ಪರಿಸರ ಕಾಳಜಿಯನ್ನು ಅಳವಡಿಸಿಕೊಂಡು ಭಾರತವನ್ನು ಇನ್ನಷ್ಟು ಸುಂದರ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಮೂಲಿಮನಿ ಮಾತನಾಡಿದರು. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಕುಂಬಾರ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಗಣ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.
“ಪ್ರಾಣಿ, ಪಕ್ಷಿ ಸೇರಿದಂತೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂಬ ಮೌಲ್ಯವನ್ನು ಅಮೆರಿಕದ ಜನರು ಆಚರಣೆಯಲ್ಲಿ ಪಾಲಿಸುತ್ತಿದ್ದಾರೆ. ಪರಿಸರದ ಮೇಲಿನ ಅವರ ಬದ್ಧತೆ ಮಾದರಿಯಾಗಿದೆ.”
ವೀಣಾ ತಿರ್ಲಾಪೂರ, ಲೇಖಕಿ



