ಬೆಂಗಳೂರು: ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳವನ್ನು ಖಂಡಿಸಿ ಹಾಗೂ ರಕ್ಷಣೆ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಸುಮಾರು 58,000ಕ್ಕೂ ಹೆಚ್ಚು ಬೇಕರಿ, ಬೀಡಾ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಜೂನ್ 18ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಅವರು ಮಾತನಾಡಿ, ಸಣ್ಣ ವ್ಯಾಪಾರಿಗಳು ಕಾನೂನುಬದ್ಧವಾಗಿ ವ್ಯಾಪಾರ ನಡೆಸುತ್ತಾ ತೆರಿಗೆ ಪಾವತಿಸುತ್ತಿದ್ದರೂ ನಿರಂತರ ತಪಾಸಣೆ, ದಂಡ ಹಾಗೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬೇಕರಿಗಳು ಹಾಗೂ ಸಣ್ಣ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ. ರಾಜ್ಯದ ಇತರ ಭಾಗಗಳಲ್ಲಿ ಭಾಗಶಃ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದ್ದು, ಪ್ರತಿಭಟನೆ ವಿಸ್ತರಿಸುವ ಸೂಚನೆಗಳಿವೆ.
ಸಂಘಟನೆಗಳ ಪ್ರಕಾರ, ಅಧಿಕಾರಿಗಳು ವ್ಯಾಪಾರಿಗಳನ್ನು ಪೊಲೀಸ್ ಠಾಣೆ ಹಾಗೂ ಪಾಲಿಕೆ ಕಚೇರಿಗಳಿಗೆ ಅಲೆದಾಡಿಸಿ ವಿಚಾರಣೆ ನಡೆಸುತ್ತಿರುವುದು ಹಾಗೂ ಅನಗತ್ಯ ದಂಡ ವಿಧಿಸುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಂಘಟನೆಗಳು ಎಚ್ಚರಿಸಿದ್ದು, ತಮ್ಮ ಬೇಡಿಕೆಗಳು ಈಡೇರದವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿವೆ.



