ಮುಂಬೈ: ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಖ್ಯಾತ ಗಾಯಕ ಸೋನು ನಿಗಮ್ ಅವರು ಚಿಕಿತ್ಸೆ ನಡುವೆಯೂ ತಮ್ಮ ಲೈವ್ ಪರ್ಫಾರ್ಮೆನ್ಸ್ ಮುಂದುವರಿಸಲು ನಿರ್ಧರಿಸಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮುಂಬೈನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೂ ಮುನ್ನ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಸೋನು ನಿಗಮ್, ನರಗಳ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಕಳೆದ ಒಂದು ವಾರದಿಂದ ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದು, ನಿರಂತರ ಔಷಧಿ ಮತ್ತು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಫಿಸಿಯೋಥೆರಪಿ ವೇಳೆ ತೀವ್ರ ನೋವು ಅನುಭವಿಸುತ್ತಿರುವುದಾಗಿ ಹೇಳಿರುವ ಅವರು, ಸದ್ಯ ನೋವು ನಿವಾರಕ ಔಷಧಿಗಳ ಸಹಾಯದಿಂದ ಚಿಕಿತ್ಸೆಯನ್ನು ಮುಂದುವರಿಸುತ್ತಿದ್ದಾರೆ.
ಇದೇ ವೇಳೆ ವೈದ್ಯರು ನೀಡಿರುವ ಹೈ-ಡೋಸ್ ಔಷಧಿಗಳ ಪರಿಣಾಮ ಗಂಟಲಿನ ಧ್ವನಿಯ ಮೇಲೂ ಬಿದ್ದಿದ್ದು, ‘ಗಂಟಲು ಸ್ವಲ್ಪ ಭಾರವಾಗಿರುವ ಅನುಭವವಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಗಾಯಕರಿಗೆ ಧ್ವನಿಯಲ್ಲಿ ಸಣ್ಣ ಬದಲಾವಣೆಯಾದರೂ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದರೆ ಸೋನು ನಿಗಮ್ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸದೆ ಅಭಿಮಾನಿಗಳ ಮುಂದೆ ಹಾಡಲು ಸಿದ್ಧರಾಗಿದ್ದಾರೆ. ಅವರ ಆರೋಗ್ಯ ಶೀಘ್ರವಾಗಿ ಸುಧಾರಿಸಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸುತ್ತಿದ್ದಾರೆ.



