ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಆರೋಪ ಪ್ರಕರಣದಲ್ಲಿ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜನ್ ತಂಗುದೊರೈ ಅವರನ್ನು ವಿಶ್ವವಿದ್ಯಾಲಯ ಆಡಳಿತ ಅಮಾನತುಗೊಳಿಸಿದೆ.
ಪಿಎಚ್‌ಡಿ ಸಂಶೋಧನೆಗಾಗಿ ತಮ್ಮ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಪ್ರಾಧ್ಯಾಪಕರು ವೈಯಕ್ತಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ವಿದ್ಯಾರ್ಥಿನಿ ಅಧ್ಯಯನವನ್ನು ಅರ್ಧದಲ್ಲೇ ನಿಲ್ಲಿಸಿ ತೆರಳಿದ ನಂತರವೂ ಆಕೆಯನ್ನು ಮರಳಿ ಕರೆಸುವಂತೆ ಇತರ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿತ್ತು.
ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳದ ವಿಶ್ವವಿದ್ಯಾಲಯ ಆಡಳಿತದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಆಡಳಿತ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು ಹೂವಿನ ಕುಂಡಗಳನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದರು.
ಕುಲಪತಿ ಕಚೇರಿಯೊಳಗೆ ಪ್ರವೇಶಿಸಲು ಕೆಲ ಕಾರ್ಯಕರ್ತರು ಯತ್ನಿಸಿದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಿಂಡಿಕೇಟ್ ಸದಸ್ಯರ ಸಭೆ ನಡೆಸಿದ ವಿಶ್ವವಿದ್ಯಾಲಯ ಆಡಳಿತ, ಪ್ರಾಧ್ಯಾಪಕರ ವಿರುದ್ಧ ತಕ್ಷಣದ ಅಮಾನತು ಕ್ರಮ ಜಾರಿಗೊಳಿಸಿತು. ಜೊತೆಗೆ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಪತ್ತೆಹಚ್ಚಲು ವಿಶೇಷ ತನಿಖಾ ಸಮಿತಿ ರಚಿಸಲಾಗಿದೆ.
ಕುಲಪತಿ ಪ್ರೊ. ಎ.ಎಂ. ಖಾನ್ ನೇತೃತ್ವದ ಆಡಳಿತ, ತನಿಖಾ ವರದಿ ಬಂದ ಬಳಿಕ ಮುಂದಿನ ಕಾನೂನು ಹಾಗೂ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಪೊಲೀಸ್ ತನಿಖೆಯೂ ಅಗತ್ಯ ಎಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.



