ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾಜಿ ಸಚಿವ ಎಚ್.ಕೆ. ಪಾಟೀಲ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಹಾಗೂ ರೋಣ ಶಾಸಕ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಬಸವರಾಜ ಹೊಳಲಾಪೂರ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಎಚ್.ಕೆ. ಪಾಟೀಲ ಹಾಗೂ ಜಿ.ಎಸ್. ಪಾಟೀಲ ಇಬ್ಬರೂ ಮಹತ್ವದ ಕೊಡುಗೆ ನೀಡಿದ್ದಾರೆ. ಇವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಗೊಳ್ಳಲಿದ್ದು, ಸಂಘಟನೆಯ ಶಕ್ತಿಯೂ ವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ.
ಎಚ್.ಕೆ. ಪಾಟೀಲ ಅವರು ಮುತ್ಸದ್ದಿ, ಅಧ್ಯಯನಶೀಲ ಹಾಗೂ ಕಳಂಕರಹಿತ ರಾಜಕಾರಣಿಯಾಗಿ ರಾಜ್ಯದಲ್ಲಿ ವಿಶಿಷ್ಟ ಹೆಸರನ್ನು ಗಳಿಸಿದ್ದಾರೆ.
ಮತ್ತೊಂದೆಡೆ, ಜಿ.ಎಸ್. ಪಾಟೀಲ ಅವರು ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಈ ಇಬ್ಬರು ನಾಯಕರಿಗೂ ಅವಕಾಶ ದೊರೆಯುವ ವಿಶ್ವಾಸ ಕಾರ್ಯಕರ್ತರಲ್ಲಿ ಇದೆ.
ವಿಶೇಷವಾಗಿ “ಸಾವಿರ ಕೆರೆಗಳ ಸರದಾರ” ಎಂದು ಹೆಸರಾಗಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಸಮರ್ಪಕ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಎಚ್.ಕೆ. ಪಾಟೀಲರ ಅನುಭವ ಮತ್ತು ಜಿ.ಎಸ್. ಪಾಟೀಲರ ಸಂಘಟನಾ ಸಾಮರ್ಥ್ಯವನ್ನು ಸರ್ಕಾರ ಬಳಸಿಕೊಳ್ಳಬೇಕು. ಇಬ್ಬರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ.”
– ರಾಹುಲ್ ಬಸವರಾಜ ಹೊಳಲಾಪೂರ, ಅಧ್ಯಕ್ಷರು, ಲಕ್ಷ್ಮೇಶ್ವರ ತಾಲೂಕು ಯುವ ಕಾಂಗ್ರೆಸ್



