ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸುವ ಮೂಲಕ ಪಕ್ಷ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ದ್ರೋಹ ಎಸಗಿದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ಆಘಾತಕಾರಿಯಾಗಿದೆ ಎಂದು ಹೇಳಿದರು. ಜೆಡಿಎಸ್‌ನಿಂದ ಸುಮಾರು ಆರೇಳು ಶಾಸಕರು ಹಾಗೂ ಬಿಜೆಪಿಯಿಂದ ನಾಲ್ಕೈದು ಶಾಸಕರು ಅಡ್ಡ ಮತದಾನ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
“ಈ ರೀತಿಯ ಘಟನೆ ನಡೆಯಬಾರದಿತ್ತು. ಆದರೆ ದುರದೃಷ್ಟವಶಾತ್ ಅದು ನಡೆದಿದೆ. ಪಕ್ಷದ ಬೆನ್ನಿಗೆ ಇರಿದು ರಾಜಕೀಯ ಆಟ ಆಡಿದವರು ಯಾರು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ನಮ್ಮ ಬಳಿ ಇದೆ. ಇವತ್ತು ಅಥವಾ ನಾಳೆಯೊಳಗೆ ಸಂಪೂರ್ಣ ಚಿತ್ರಣ ದೊರೆಯಲಿದೆ,” ಎಂದು ವಿಜಯೇಂದ್ರ ಹೇಳಿದರು.
ಈ ಕ್ರಾಸ್ ವೋಟಿಂಗ್‌ನಿಂದ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ಬೇಸರವಾಗಿದೆ. ಬಿಜೆಪಿಗೂ ಇದೇ ಮಟ್ಟದ ನೋವಾಗಿದೆ. ಈ ರಾಜಕೀಯ ದ್ರೋಹವನ್ನು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ ಎಂದು ಅವರು ತಿಳಿಸಿದರು.
ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಈಗಾಗಲೇ ಸಮಯ ಕೋರಿದ್ದು, ಇವತ್ತು ಅಥವಾ ಸೋಮವಾರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿದ್ದೇನೆ. ಪಕ್ಷದಲ್ಲೇ ಇದ್ದುಕೊಂಡು ದ್ರೋಹ ಎಸಗಿರುವ ‘ಮೀರ್ ಸಾದಿಕ್’ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ವರಿಷ್ಠರಿಗೆ ನೀಡಲಿದ್ದೇನೆ ಎಂದು ವಿಜಯೇಂದ್ರ ಹೇಳಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ದ್ರೋಹ ಎಸಗಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.



