ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೊರತೆಯ ನಡುವೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಶುಕ್ರವಾರ ಪಟ್ಟಣದ ವಿವಿಧ ರಸಗೊಬ್ಬರ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೊಬ್ಬರ ದಾಸ್ತಾನು, ದರಪಟ್ಟಿ, ವಿತರಣಾ ವ್ಯವಸ್ಥೆ, ಬಿಲ್ ಪುಸ್ತಕ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಗೊಬ್ಬರ ಮಾರಾಟದ ವೇಳೆ ರೈತರಿಗೆ ನಿಯಮಾನುಸಾರ ಬಿಲ್ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಅಂಗಡಿ ಮಾಲೀಕರನ್ನು ಪ್ರಶ್ನಿಸಿದರು. ಗೋಡೆಯ ಮೇಲಿನ ದಾಸ್ತಾನು ವಿವರ, ದಾಖಲಾತಿ ಪುಸ್ತಕ ಹಾಗೂ ಗೋಡೌನ್ನಲ್ಲಿರುವ ಸಂಗ್ರಹದ ಮಾಹಿತಿಯನ್ನು ತಾಳೆ ಹಾಕಿ ಪರಿಶೀಲಿಸಿದರು.
ಮಳೆಯಾದ ಬಳಿಕ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಗತ್ಯ ದಾಸ್ತಾನು ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ರೈತರು ಮಳೆಯ ಕೊರತೆಯಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿರುವ ಬಗ್ಗೆ ಮಾಹಿತಿ ನೀಡಿದಾಗ, ಅದು ತಾತ್ಕಾಲಿಕ ಪರಿಹಾರ ಮಾತ್ರ. ಉತ್ತಮ ಇಳುವರಿ ಪಡೆಯಲು ಸಮರ್ಪಕ ಮಳೆಯೇ ಅಗತ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.
ಮುಂದಿನ ದಿನಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೃಷಿ ಪರಿಕರ ಮಾರಾಟಗಾರರು ರೈತರೊಂದಿಗೆ ಸಹಾನುಭೂತಿಯಿಂದ ವರ್ತಿಸಬೇಕು. ರಸಗೊಬ್ಬರ ವಿತರಣೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದು, ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಅಥವಾ ಬಿಳಿ ಹಾಳೆಯಲ್ಲಿ ಬಿಲ್ ನೀಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಸ್ತುತ ಯೂರಿಯಾ ಮತ್ತು ಡಿಎಪಿ ಹೊರತುಪಡಿಸಿ ಇತರೆ ಕಾಂಪ್ಲೆಕ್ಸ್ ಗೊಬ್ಬರಗಳು ಲಭ್ಯವಿದ್ದು, ಯೂರಿಯಾ ದಾಸ್ತಾನು ಕೂಡ ಶೀಘ್ರದಲ್ಲೇ ಬರಲಿರುವುದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ರೈತರು ರಾಸಾಯನಿಕ ಗೊಬ್ಬರಗಳ ಮೇಲೆಯೇ ಅವಲಂಬಿತರಾಗದೆ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರು ಗೊಬ್ಬರ, ಜೀವಾಮೃತ ಹಾಗೂ ನ್ಯಾನೋ ಗೊಬ್ಬರಗಳಂತಹ ಪರ್ಯಾಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಶೀಲನೆ ವೇಳೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ, ಪಿಎಸ್ಐ ನಾಗರಾಜ ಗಡದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ರಸಗೊಬ್ಬರ ವಿತರಣೆಯಲ್ಲಿ ಕೃತಕ ಅಭಾವ ಸೃಷ್ಟಿ, ಹೆಚ್ಚುವರಿ ದರ ವಸೂಲಿ ಹಾಗೂ ನಿಯಮ ಉಲ್ಲಂಘನೆ ಸಹಿಸಲಾಗುವುದಿಲ್ಲ. ರೈತರಿಗೆ ನ್ಯಾಯಸಮ್ಮತ ಸೇವೆ ದೊರೆಯಬೇಕು.”
– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



