ವಿಜಯಸಾಕ್ಷಿ ಸುದ್ದಿ, ಧಾರವಾಡ: ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ನೆರವಾಗುವ ಉದ್ದೇಶದಿಂದ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನ ‘ನರ್ಚರ್ ಮೆರಿಟ್’ ಯೋಜನೆಯಡಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೊದಲ ಬಾರಿಗೆ ಬರೆದು ಶೇ.80ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ದ್ವಿತೀಯ ಪಿಯುಸಿ ನಂತರ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ.
ಇಂಜಿನಿಯರಿಂಗ್ ಪ್ರವೇಶಾಕಾಂಕ್ಷಿಗಳು ಸಿಇಟಿ ಪರೀಕ್ಷೆಯಲ್ಲಿ 25 ಸಾವಿರಕ್ಕಿಂತ ಕಡಿಮೆ ರ‍್ಯಾಂಕ್ ಪಡೆದಿರಬೇಕು. ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ 3 ಸಾವಿರಕ್ಕಿಂತ ಕಡಿಮೆ ಹಾಗೂ ಅಖಿಲ ಭಾರತ ಮಟ್ಟದಲ್ಲಿ 60 ಸಾವಿರಕ್ಕಿಂತ ಕಡಿಮೆ ರ‍್ಯಾಂಕ್ ಪಡೆದಿರಬೇಕು ಎಂದು ಸಂಸ್ಥೆ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ಮಾಸಿಕ ಆದಾಯ ₹15 ಸಾವಿರಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಗಳ ಪೋಷಕರು ಕರ್ನಾಟಕದ ನಿವಾಸಿಗಳಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ವಿದ್ಯಾಪೋಷಕ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ, ಮಾರ್ಗಸೂಚಿಗಳು ಹಾಗೂ ನಿಯಮಗಳಿಗಾಗಿ ವಿದ್ಯಾಪೋಷಕ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ. ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಗಾಗಿ ಡಾ. ಎಸ್.ಬಿ. ಸಜ್ಜನರ, ಡಾ. ಪ್ರಭು ಗಂಜಿಹಾಳ, ಡಾ. ಪ್ರಕಾಶ ಕಣವಿ, ಪ್ರೊ. ಮಂಜುನಾಥ ಹೊಳ್ಳಿಯವರ, ಪ್ರೊ. ಎಚ್.ಎನ್. ಕಾಳೆ ಹಾಗೂ ಆರ್.ಕೆ. ಭಾಗವಾನ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



