ವಿಜಯಸಾಕ್ಷಿ ಸುದ್ದಿ, ಧಾರವಾಡ: ಅವಸರ್ ಫೌಂಡೇಶನ್ ಟ್ರಸ್ಟ್‌ನ ಆರ್ಥಿಕ ಸಹಕಾರದಿಂದ ಕೆಯು ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸಲಾಗಿರುವ ನವೀಕೃತ ತರಗತಿ ಕೊಠಡಿಗಳು ಹಾಗೂ ಸ್ಮಾರ್ಟ್ ಬೋರ್ಡ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಉನ್ನತ ಭಾರತ ಅಭಿಯಾನ ಕೋಶ, ಕೆಯು ಪಬ್ಲಿಕ್ ಶಾಲೆ ಹಾಗೂ ಅವಸರ್ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ₹30 ಲಕ್ಷ ವೆಚ್ಚದ ನವೀಕೃತ ವರ್ಗ ಕೊಠಡಿಗಳು ಮತ್ತು ಸ್ಮಾರ್ಟ್ ಬೋರ್ಡ್ ಹಸ್ತಾಂತರ ಕಾರ್ಯಕ್ರಮ ಹಾಗೂ ದತ್ತು ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವಸರ್ ಫೌಂಡೇಶನ್ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಉದಾರವಾಗಿ ನೆರವು ನೀಡಿರುವುದು ಶ್ಲಾಘನೀಯ. ನವೀಕರಣದ ನಂತರ ಶಾಲೆಗೆ ಹೊಸ ಮೆರುಗು ಬಂದಿದ್ದು, ದತ್ತು ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಅವಸರ್ ಫೌಂಡೇಶನ್ ಸಂಸ್ಥಾಪಕ ಆನಂದ ಚತುರ್ವೇದಿ ಮಾತನಾಡಿ, ಕಳೆದ 14 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಾಜಕ್ಕೆ ಮರಳಿ ಕೊಡುವ ಮನೋಭಾವವೇ ಈ ಕಾರ್ಯಗಳಿಗೆ ಪ್ರೇರಣೆಯಾಗಿದೆ. ಶಿಷ್ಯವೇತನ ಪಡೆದ ವಿದ್ಯಾರ್ಥಿನಿಯರ ಬದುಕಿನಲ್ಲಿ ಈ ಕ್ಷಣ ಸ್ಮರಣೀಯವಾಗಿರಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯು ಪಬ್ಲಿಕ್ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹30 ಲಕ್ಷ ವೆಚ್ಚ ಮಾಡಿ ಕೊಡುಗೆ ನೀಡಿರುವ ಆನಂದ ಚತುರ್ವೇದಿ ಅವರ ಸೇವೆ ಅನುಕರಣೀಯವಾಗಿದೆ. ಪ್ರಸಕ್ತ ಸಾಲಿನಿಂದ ತಾವು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಅವಸರ್ ಫೌಂಡೇಶನ್ ವತಿಯಿಂದ ವಿಶ್ವವಿದ್ಯಾಲಯದ ದತ್ತು ಗ್ರಾಮಗಳ 13 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ತಲಾ ₹10 ಸಾವಿರ ಶಿಷ್ಯವೇತನದ ಚೆಕ್‌ಗಳನ್ನು ವಿತರಿಸಲಾಯಿತು.
ಉನ್ನತ ಭಾರತ ಅಭಿಯಾನ ಕೋಶದ ಸಂಯೋಜಕಿ ಪ್ರೊ. ತ್ರಿವೇಣಿ ಎಸ್., ಸಂಯೋಜಕ ಡಾ. ಚೇತನ್ ಜೆ.ಡಿ., ಮುಖ್ಯ ಅತಿಥಿಗಳಾದ ಪ್ರೊ. ಜೆ.ಎಂ. ಚೆಂದುನವರ, ಪ್ರೊ. ಸಂಗೀತಾ ಮಾನೆ, ಪ್ರೊ. ಎನ್. ರಾಮಾಂಜನೇಯಲು, ಸ್ಥಾನಿಕ ಅಭಿಯಂತರ ಗಿರೀಶ ಜೋಶಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯೆ ಅನಸೂಯಾ ನಾಯಕ ಸ್ವಾಗತಿಸಿದರು. ಎಂ.ಎಸ್. ಹಿರೇಮಠ ವಂದಿಸಿದರು.
“ಸ್ಮಾರ್ಟ್ ಬೋರ್ಡ್ ಮತ್ತು ಆಧುನಿಕ ಕಲಿಕಾ ಸೌಲಭ್ಯಗಳು ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಗೆ ನೆರವಾಗುತ್ತವೆ. ಇಂತಹ ದಾನಿಗಳ ಸಹಕಾರದಿಂದ ಶಿಕ್ಷಣ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಲಿದೆ.”
– ಪ್ರೊ. ಎ.ಎಂ. ಖಾನ್, ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ



