ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಮುಗನೂರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ ಹಾಗೂ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಮುಗನೂರ ಗ್ರಾಮದ ಭದ್ರಸ್ವಾಮಿ (32) ಹಾಗೂ ಸದಾಶಿವ ಸ್ವಾಮಿ (10) ಎಂದು ಗುರುತಿಸಲಾಗಿದೆ.
ಭದ್ರಸ್ವಾಮಿ ಮತ್ತು ಸದಾಶಿವ ಸ್ವಾಮಿ ನಿನ್ನೆ ಎಮ್ಮೆ ಮೇಯಿಸಲು ಗ್ರಾಮ ಸಮೀಪದ ಪ್ರದೇಶಕ್ಕೆ ತೆರಳಿದ್ದರು. ಸಂಜೆ ವೇಳೆಯಾದರೂ ಇಬ್ಬರೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು. ಅವರು ಮೇಯಿಸಲು ಕರೆದೊಯ್ದಿದ್ದ ಎಮ್ಮೆಗಳು ಮಾತ್ರ ಗ್ರಾಮಕ್ಕೆ ಮರಳಿದ್ದರಿಂದ ಅನುಮಾನಗೊಂಡ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು.
ಈ ವೇಳೆ ಗ್ರಾಮದ ಹೊರವಲಯದಲ್ಲಿರುವ ಕೃಷಿ ಹೊಂಡದ ಸಮೀಪ ಇಬ್ಬರ ಬಟ್ಟೆಗಳು ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಕೃಷಿ ಹೊಂಡದಿಂದ ಇಬ್ಬರ ಶವಗಳನ್ನು ಹೊರತೆಗೆದರು.
ಪ್ರಾಥಮಿಕ ತನಿಖೆಯ ಪ್ರಕಾರ, ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



