ಭುವನೇಶ್ವರ: ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಹೆರಿಗೆ ನಡೆಯುವುದು ಸಹಜ. ಆದರೆ ಒಡಿಶಾದಲ್ಲಿ ಮಹಿಳೆಯೊಬ್ಬರು ಎರಡು ವಿಭಿನ್ನ ಚಲಿಸುತ್ತಿರುವ ವಾಹನಗಳಲ್ಲಿ ತಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಹಾಗೂ ಅಚ್ಚರಿಯ ಘಟನೆ ನಡೆದಿದೆ. ಮೊದಲ ಮಗು ಚಲಿಸುತ್ತಿದ್ದ ರೈಲಿನಲ್ಲಿ ಜನಿಸಿದರೆ, ಎರಡನೇ ಮಗು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನಲ್ಲೇ ಜನಿಸಿದೆ.
ರೂರ್ಕೆಲಾ-ಗುಣುಪುರ್ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಏಕಾಏಕಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಹ ಪ್ರಯಾಣಿಕರು ಕೂಡಲೇ ‘ರೈಲ್ ಮದದ್’ ಪೋರ್ಟಲ್ ಮೂಲಕ ರೈಲ್ವೆ ಇಲಾಖೆಗೆ ತುರ್ತು ಮಾಹಿತಿ ರವಾನಿಸಿದರು.
ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಹಾಗೂ ಆರ್‌ಪಿಎಫ್ ಸಿಬ್ಬಂದಿ ಕಟಕ್ ರೈಲು ನಿಲ್ದಾಣದಲ್ಲಿ ವೈದ್ಯಕೀಯ ನೆರವಿನೊಂದಿಗೆ ಸಜ್ಜಾಗಿದ್ದರು. ಆದರೆ ರೈಲು ನಿಲ್ದಾಣ ತಲುಪುವ ಮೊದಲೇ ಮಹಿಳೆ ಚಲಿಸುತ್ತಿರುವ ರೈಲಿನಲ್ಲೇ ಮೊದಲ ಗಂಡು ಮಗುವಿಗೆ ಜನ್ಮ ನೀಡಿದರು.
ರೈಲು ಕಟಕ್ ನಿಲ್ದಾಣ ತಲುಪುತ್ತಿದ್ದಂತೆಯೇ ರೈಲ್ವೆ ಸಿಬ್ಬಂದಿ ಮಹಿಳೆಯನ್ನು 108 ಆಂಬ್ಯುಲೆನ್ಸ್ ಮೂಲಕ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದರು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಆಂಬ್ಯುಲೆನ್ಸ್ ಒಳಗೆ ಮತ್ತೊಮ್ಮೆ ಹೆರಿಗೆ ನೋವು ಕಾಣಿಸಿಕೊಂಡು ಮಹಿಳೆ ಎರಡನೇ ಮಗುವಿಗೂ ಜನ್ಮ ನೀಡಿದರು.
ಒಂದು ಮಗು ರೈಲಿನಲ್ಲಿ ಹಾಗೂ ಮತ್ತೊಂದು ಮಗು ಆಂಬ್ಯುಲೆನ್ಸ್‌ನಲ್ಲಿ ಜನಿಸಿರುವ ಈ ಅಪರೂಪದ ಘಟನೆ ವೈದ್ಯಕೀಯ ಸಿಬ್ಬಂದಿಯನ್ನೇ ಅಚ್ಚರಿಗೊಳಿಸಿದೆ. ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಮೂವರೂ ಸುರಕ್ಷಿತವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಂಕಷ್ಟದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ ಸಹ ಪ್ರಯಾಣಿಕರು, ರೈಲ್ವೆ ಸಿಬ್ಬಂದಿ, ಆರ್‌ಪಿಎಫ್ ಪಡೆ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆ ಭಾರೀ ವೈರಲ್ ಆಗಿದ್ದು, ಮಾನವೀಯತೆ ಮತ್ತು ತುರ್ತು ಸೇವೆಗಳ ಪರಿಣಾಮಕಾರಿ ಕಾರ್ಯಾಚರಣೆಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.



