HomeGadag Newsಮಳೆ ಕೈಕೊಟ್ಟರೂ ಬೆಳೆ ಉಳಿಸಬಹುದು: ಬಸವರಾಜ ಗದಗಿನ

ಮಳೆ ಕೈಕೊಟ್ಟರೂ ಬೆಳೆ ಉಳಿಸಬಹುದು: ಬಸವರಾಜ ಗದಗಿನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮುಂಗಾರು ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೆಳೆಗಳನ್ನು ಸಂರಕ್ಷಿಸಬೇಕು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ಗದಗಿನ ಸಲಹೆ ನೀಡಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬೆಳೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಎಲೆಗಳ ಮೂಲಕ ಸಿಂಪಡಿಸಬೇಕು. 19:19:19 ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 5 ಗ್ರಾಂ ಪ್ರಮಾಣದಲ್ಲಿ ಬೆರೆಸಿ, ಪ್ರತಿ ಎಕರೆಗೆ 180 ರಿಂದ 200 ಲೀಟರ್ ದ್ರಾವಣವನ್ನು ಸಿಂಪಡಿಸಬಹುದು ಎಂದು ತಿಳಿಸಿದರು.

ಪರ್ಯಾಯವಾಗಿ ಪೊಟ್ಯಾಶಿಯಂ ನೈಟ್ರೇಟ್ (13:0:45) ಅನ್ನು ಪ್ರತಿ ಲೀಟರ್ ನೀರಿಗೆ 5 ರಿಂದ 10 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸುವುದರಿಂದ ಬೆಳೆಗಳ ಬೆಳವಣಿಗೆಗೆ ನೆರವಾಗುತ್ತದೆ ಎಂದು ಹೇಳಿದರು.

ಮಣ್ಣಿನಲ್ಲಿರುವ ತೇವಾಂಶ ಉಳಿಸಿಕೊಳ್ಳಲು ಹೊಲಗಳಲ್ಲಿ ಹೊದಿಕೆ ಪದ್ಧತಿ ಅಳವಡಿಸಿಕೊಳ್ಳಬೇಕು. ಕಳೆ ನಿಯಂತ್ರಣ ಮಾಡಿ, ಒಣಗಿದ ಬೆಳೆ ಅವಶೇಷಗಳನ್ನು ಹೊದಿಕೆಯಾಗಿ ಬಳಸುವುದರಿಂದ ಮಣ್ಣಿನ ತೇವಾಂಶ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ತೆಳುವಾಗಿ ಎಡೆಕುಂಟಿ ಹೊಡೆಯುವುದರಿಂದ ಜಮೀನಿನಲ್ಲಿ ಉಂಟಾಗಿರುವ ಬಿರುಕುಗಳು ಮುಚ್ಚಿಕೊಳ್ಳುತ್ತವೆ. ಇದರಿಂದ ಮಳೆಯ ಕೊರತೆಯ ನಡುವೆಯೂ ಬೆಳೆಗಳ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ನರೇಗಲ್ಲ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆಯ ಸಿಬ್ಬಂದಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ರೈತರಿಗೆ ಈ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಕೃಷಿಗೆ ನೆರವಾಗುವ ವಿಶೇಷ ಬೈಕ್

ಈ ಸಂದರ್ಭದಲ್ಲಿ ಇಳಕಲ್ ತಾಲೂಕಿನ ಸೂಳಿಬಾವಿ ಗ್ರಾಮದ ರೈತ ಬಸವರಾಜ ಉಳ್ಳಾಗಡ್ಡಿ ಅವರು ತಮ್ಮ ಬೈಕ್‌ನ್ನು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪರಿವರ್ತಿಸಿರುವುದನ್ನು ಪ್ರದರ್ಶಿಸಿದರು. ಅಂತರ ಬೇಸಾಯ, ಔಷಧಿ ಸಿಂಪರಣೆ ಹಾಗೂ ಹರಗುವ ಕಾರ್ಯಗಳಿಗೆ ಬಳಸಬಹುದಾದ ಈ ವಾಹನವನ್ನು ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ.

ಒಂದು ಎಕರೆ ಕೃಷಿ ಕಾರ್ಯಕ್ಕೆ ಕೇವಲ ಒಂದು ಲೀಟರ್ ಪೆಟ್ರೋಲ್ ಸಾಕಾಗುತ್ತಿದ್ದು, 200 ಲೀಟರ್ ಸಿಂಪಡಣೆ ದ್ರಾವಣವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ಗಾಂಜಾ ಬೆಳೆ ಬೆಳೆದರೆ ಕಾನೂನು ಕ್ರಮ

ಕೆಲವು ರೈತರು ಹೊಲಗಳಲ್ಲಿ ಗಾಂಜಾ ಬೆಳೆ ಬೆಳೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಗಾಂಜಾ ಬೆಳೆಯುವುದು ಕಾನೂನುಬಾಹಿರವಾಗಿದ್ದು, ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಅಂತಹ ಪ್ರಕರಣಗಳು ಇಲಾಖೆಯ ಗಮನಕ್ಕೆ ಬಂದರೆ ಸಂಬಂಧಿಸಿದ ರೈತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಗದಗಿನ ಎಚ್ಚರಿಕೆ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!