ಲಂಡನ್: ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಅಮಾನತುಗೊಂಡು ಹೊರಗುಳಿದಿದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ. ತಂಡಕ್ಕೆ ವಾಪಸಾದ ಬೆನ್ನಲ್ಲೇ ತಮ್ಮ ನಡೆ ಇಡೀ ತಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಒಪ್ಪಿಕೊಂಡಿರುವ ಸ್ಟೋಕ್ಸ್, ಸಹ ಆಟಗಾರರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಜೂನ್ 8ರಂದು ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ಬೆನ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಲಂಡನ್‌ನ ನೈಟ್‌ಕ್ಲಬ್‌ಗೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಘಟನೆಯ ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನಿಖೆ ನಡೆಸಿತ್ತು.
ತನಿಖೆಯಲ್ಲಿ ಕ್ಲಬ್‌ನಲ್ಲಿ ನಡೆದ ಸಂಘರ್ಷದಲ್ಲಿ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಅವರ ಯಾವುದೇ ನೇರ ತಪ್ಪು ಕಂಡುಬರದಿದ್ದರೂ, ತಂಡದ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದ ಕಾರಣ ಇಬ್ಬರಿಗೂ ಲಿಖಿತ ಎಚ್ಚರಿಕೆ ನೀಡಿ ಎರಡನೇ ಟೆಸ್ಟ್ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಎರಡನೇ ಪಂದ್ಯದಲ್ಲಿ ಸ್ಟೋಕ್ಸ್ ತಂಡದಿಂದ ಹೊರಗುಳಿದಿದ್ದರು.
ಈಗ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಬೆನ್ ಸ್ಟೋಕ್ಸ್, ತಮ್ಮ ತಪ್ಪಿನಿಂದಾಗಿ ತಂಡದ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ ಎಂದು ಒಪ್ಪಿಕೊಂಡರು.
“ಒಬ್ಬ ನಾಯಕನಾಗಿ ನಡೆದ ಘಟನೆಗೆ ಸಂಪೂರ್ಣ ಜವಾಬ್ದಾರಿ ನನ್ನದೇ. ನನ್ನ ನಡೆ ತಂಡದ ಗಮನವನ್ನು ಬೇರೆಡೆ ಸೆಳೆದಿತು. ಇಂಗ್ಲೆಂಡ್ ಪರ ಹೊಸದಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜೇಮ್ಸ್ ರಿವ್, ಜೋರ್ಡನ್ ಕಾಕ್ಸ್ ಹಾಗೂ ಸೋನಿ ಬೇಕರ್ ಅವರ ವಿಶೇಷ ಕ್ಷಣಗಳು ಈ ವಿವಾದದ ನಡುವೆ ಮಂಕಾದವು,” ಎಂದು ಸ್ಟೋಕ್ಸ್ ಹೇಳಿದ್ದಾರೆ.
ಇದರ ಜೊತೆಗೆ, ತಮ್ಮ ಅನುಪಸ್ಥಿತಿಯಲ್ಲಿ ಜೋ ರೂಟ್ ನಾಯಕತ್ವದಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ತಂಡವು ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 253 ರನ್‌ಗಳ ಭಾರಿ ಸೋಲು ಅನುಭವಿಸಿತು. ಈ ಸೋಲಿನ ಬಳಿಕ ಹಂಗಾಮಿ ನಾಯಕ ಜೋ ರೂಟ್ ಟೀಕೆಗೆ ಗುರಿಯಾಗಬೇಕಾಯಿತು ಎಂಬುದನ್ನೂ ಸ್ಟೋಕ್ಸ್ ಉಲ್ಲೇಖಿಸಿದರು.
“ಲಾರ್ಡ್ಸ್‌ನಲ್ಲಿ ಮೊದಲ ಟೆಸ್ಟ್ ಗೆಲುವಿನ ಸಂಭ್ರಮಾಚರಣೆಯ ವೇಳೆ ಮಧ್ಯರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿ ನೈಟ್‌ಕ್ಲಬ್‌ನಲ್ಲಿ ಉಳಿದುಕೊಂಡದ್ದು ನನ್ನ ತಪ್ಪು. ಈ ಘಟನೆ ಇಡೀ ತಂಡದ ಏಕಾಗ್ರತೆಗೆ ಧಕ್ಕೆ ತಂದಿತು. ಅದಕ್ಕಾಗಿ ನಾನು ತಂಡದ ಎಲ್ಲ ಸದಸ್ಯರ ಬಳಿ ಕ್ಷಮೆ ಕೇಳುತ್ತೇನೆ,” ಎಂದು ಸ್ಟೋಕ್ಸ್ ತಿಳಿಸಿದ್ದಾರೆ.



