ಬೆಂಗಳೂರು: ವಿಜಯಪುರದಲ್ಲಿ ರೈಲ್ವೆ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು ಕೋಚ್ ಡಿಪೋ ಸ್ಥಾಪಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಈಗಾಗಲೇ ಸಚಿವ ಸೋಮಣ್ಣ ಅವರೊಂದಿಗೆ ಚರ್ಚೆ ನಡೆದಿದ್ದು, ಅಧಿಕೃತವಾಗಿ ಕೇಂದ್ರ ರೈಲ್ವೆ ಸಚಿವರಿಗೂ ಪತ್ರ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ವಿಜಯಪುರ ರೈಲು ನಿಲ್ದಾಣದ ಆವರಣದಲ್ಲಿ ಇದ್ದ ಗೂಡ್ಸ್ ಶೆಡ್ ಅನ್ನು ಅಲಿಯಾಬಾದ್ಗೆ ಸ್ಥಳಾಂತರಿಸಿರುವುದರಿಂದ ಕೋಚ್ ಡಿಪೋ ಸ್ಥಾಪನೆಗೆ ಅಗತ್ಯವಾದ ಜಾಗ ಲಭ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಡಿಪೋ ಸ್ಥಾಪನೆಯಾದರೆ ವಿಜಯಪುರವನ್ನು ಪ್ರಮುಖ ರೈಲು ನಿರ್ವಹಣಾ ಹಬ್ ಆಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ವಿಜಯಪುರವು ಚಾರಿತ್ರಿಕ ಹಾಗೂ ಪ್ರವಾಸಿ ತಾಣವಾಗಿರುವುದರಿಂದ ವರ್ಷಪೂರ್ತಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಬ್ಬ, ವಾರಾಂತ್ಯ ಮತ್ತು ರಜೆ ದಿನಗಳಲ್ಲಿ ಹೆಚ್ಚಿನ ಜನದಟ್ಟಣೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಮತ್ತೊಂದು ಆಗಮನ ಹಾಗೂ ನಿರ್ಗಮನ ದ್ವಾರವನ್ನು ಅಭಿವೃದ್ಧಿಪಡಿಸಬೇಕು ಎಂಬುದೂ ಮನವಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.



