ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕಿಮ್ಸ್ನಲ್ಲಿ ರೋಬೋಟಿಕ್ ತಂತ್ರಜ್ಞಾನ ಬಳಸಿ ಮೊಣಕಾಲು ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ.
ಮಂಡಿ ನೋವು ಹಾಗೂ ಮೂಳೆ ಸವಕಳಿಯ 4ನೇ ಹಂತದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೊಬ್ಬರಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆರ್ಥೋಪಿಡಿಕ್ ವಿಭಾಗದ ಮುಖ್ಯಸ್ಥ ಡಾ. ಎಸ್.ಎಫ್. ಕಮ್ಮಾರ್ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ರೋಬೋಟಿಕ್ ತಂತ್ರಜ್ಞಾನ ಬಳಕೆಯಿಂದ ಶಸ್ತ್ರಚಿಕಿತ್ಸೆಯಲ್ಲಿ ನಿಖರತೆ ಹೆಚ್ಚಿದ್ದು, ಮಾನವ ದೋಷಗಳ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ರೋಗಿಗೆ ನೋವು ಕಡಿಮೆ ಆಗಿ, ಚೇತರಿಕೆ ವೇಗವಾಗಿ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಚಿಕಿತ್ಸೆಗಾಗಿ ಕಿಮ್ಸ್ ಸಂಸ್ಥೆ ಇತ್ತೀಚೆಗೆ ಸುಮಾರು ₹2.79 ಕೋಟಿ ವೆಚ್ಚದಲ್ಲಿ ರೋಬೋಟಿಕ್ ಯಂತ್ರವನ್ನು ಖರೀದಿಸಿ, ಹೈಟೆಕ್ ಆಪರೇಷನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿತ್ತು.
ಈ ರೋಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ಕಾರಣ, ಸರ್ಕಾರದ ಯೋಜನೆಯಡಿ ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿ ನೀಡಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಕೇವಲ ಒಂದು ದಿನದಲ್ಲೇ ಮಹಿಳೆ ಸುಲಭವಾಗಿ ಓಡಾಡುವಂತಾಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.
ಕಿಮ್ಸ್ ಈ ಸಾಧನೆ ಮೂಲಕ ಕರ್ನಾಟಕದ ಸರ್ಕಾರಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.



