ಮಂಡ್ಯ: ಬೆಂಗಳೂರಿನಿಂದ ಮೆಡಿಸಿನ್ ತುಂಬಿಕೊಂಡು ಮಂಡ್ಯಕ್ಕೆ ಬರುತ್ತಿದ್ದ ಕಂಟೇನರ್ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯಲ್ಲಿ ನಿನ್ನೆ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಘಟನೆ ನಡೆದಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಐಷಾರಾಮಿ ಕಾರಿನಲ್ಲಿ ಬಂದಿದ್ದ ಕೆಲವರು ಕಂಟೇನರ್ ಲಾರಿಯನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ. ಕಂಟೇನರ್‌ನಲ್ಲಿ ಚಾಲಕ ಮಾತ್ರ ಇದ್ದು, ಮೈಸೂರು ಮೂಲದ ಚಾಲಕ ಶಂಕರ್ ಘಟನೆ ಬಳಿಕ ಭಯಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡದೆ ಮುಂದೆ ಸಾಗಿದ್ದಾನೆ ಎಂದು ಹೇಳಲಾಗಿದೆ.
ಲಾರಿ ನಿಲ್ಲಿಸದ ಹಿನ್ನೆಲೆಯಲ್ಲಿ ಆರೋಪಿತರು ಗುಂಡು ಹಾರಿಸಿದ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ಮಂಡ್ಯದ ಪ್ರಭಾವಿ ವ್ಯಕ್ತಿಯ ಪುತ್ರ ಹಾಗೂ ಅವರ ತಂಡ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವೂ ಹೊರಬಂದಿದೆ.
ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಚಾಲಕ ಶಂಕರ್‌ನನ್ನು ಠಾಣೆಗೆ ಕರೆಸಿ ದೂರು ದಾಖಲಿಸಿಕೊಂಡಿದ್ದಾರೆ. ನಂತರ ಆರೋಪಿತ ವ್ಯಕ್ತಿಯನ್ನು ತಡರಾತ್ರಿ ಠಾಣೆಗೆ ಕರೆಸಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಮಂಡ್ಯ DYSP ಕಚೇರಿಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಅತೀ ಗಂಭೀರ ವಿಷಯವೆಂದರೆ, ಆರೋಪಿತನ ಬಳಿ ಗನ್ ಲೈಸೆನ್ಸ್ ಇಲ್ಲದಿದ್ದರೂ ಶಸ್ತ್ರಾಸ್ತ್ರ ಬಳಕೆಯಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆತನಿಗೆ ಗನ್ ಹೇಗೆ ದೊರಕಿತು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಇದು ದರೋಡೆ ಯತ್ನವಾಗಿತ್ತೇ ಅಥವಾ ಬೇರೆ ಕಾರಣವಿದೆಯೇ ಎಂಬುದು ಪರಿಶೀಲನೆಗೆ ಒಳಪಟ್ಟಿದೆ.



