ಬೆಂಗಳೂರು: ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಪ್ರಕ್ರಿಯೆ ಆರಂಭವಾಗಿದ್ದು, ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಹಿತಿ ಸಂಗ್ರಹದ ವೇಳೆ ಜಾತಿ ಪ್ರಮಾಣಪತ್ರ ಕೇಳಲಾಗುತ್ತಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಉಚಿತ ವಿದ್ಯುತ್ ಯೋಜನೆಗೆ ಜಾತಿ ಮಾಹಿತಿ ಏಕೆ ಬೇಕು ಎಂಬ ಪ್ರಶ್ನೆ ಎದ್ದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆ ಬೆಸ್ಕಾಂ ಜಾತಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಪರಿಶೀಲನೆ ವೇಳೆ ಜಾತಿ ಮಾಹಿತಿ ನೀಡಲು ಇಚ್ಛಿಸದ ಗ್ರಾಹಕರಿಗಾಗಿ ‘ಮಾಹಿತಿ ನೀಡಲು ನಿರಾಕರಣೆ’ ಎಂಬ ಆಯ್ಕೆಯನ್ನೂ ಫಾರ್ಮ್‌ನಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದೆ.
ಈ ಆಯ್ಕೆಯನ್ನು ಗುರುತಿಸುವ ಮೂಲಕ ಫಲಾನುಭವಿಗಳು ತಮ್ಮ ಜಾತಿ ವಿವರ ನೀಡದೇಯೇ ಮರು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಗೃಹ ಜ್ಯೋತಿ ಯೋಜನೆಗೆ ಆಧಾರ್ ನಂಬರ್ ಆಧಾರವಾಗಿ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಈಗ ಆಧಾರ್ ಜೊತೆಗೆ ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ದಾಖಲೆಗಳನ್ನು ಪರಿಶೀಲನೆಗಾಗಿ ಕೇಳಲಾಗುತ್ತಿದೆ ಎಂದು ತಿಳಿದುಬಂದಿದೆ.
ತೀವ್ರ ವಿರೋಧದ ನಡುವೆ ಜಾತಿ ಮಾಹಿತಿ ಕಡ್ಡಾಯವಲ್ಲ ಎಂಬ ಬೆಸ್ಕಾಂ ಸ್ಪಷ್ಟನೆ ಸಾರ್ವಜನಿಕರಿಗೆ ಸಮಾಧಾನ ತಂದಿದೆ.



