ತುಮಕೂರು: ಕರ್ತವ್ಯದ ಒತ್ತಡ ಹಾಗೂ ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಂದಾಯ ಇಲಾಖೆ ನೌಕರರು ನಡೆಸುತ್ತಿರುವ ಅಹೋರಾತ್ರಿ ಧರಣಿ ತೀವ್ರ ಸ್ವರೂಪ ಪಡೆದಿದೆ.
ಇತ್ತೀಚೆಗೆ ಜಾರಿಗೆ ಬಂದಿರುವ ಎಸ್‌ಐಆರ್ ಕಾರ್ಯದ ನಿಮಿತ್ತ ಕೆಲಸಕ್ಕೆ ತೆರಳುತ್ತಿದ್ದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಗ್ರಾಮ ಆಡಳಿತ ಅಧಿಕಾರಿ ಭುವನಾ ಮೃತಪಟ್ಟಿದ್ದರು. ಅವರ ಸಾವಿಗೆ ನ್ಯಾಯ ಸಿಗಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ.
ನಿನ್ನೆ ರಾತ್ರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನೌಕರರು ಇಡೀ ರಾತ್ರಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ತಡರಾತ್ರಿ ಸುಮಾರು 11:15ರ ಸುಮಾರಿಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರೂ ಸಂಧಾನ ಯಶಸ್ವಿಯಾಗಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಕಂದಾಯ ನೌಕರರ ಸಂಘ ಪಟ್ಟು ಹಿಡಿದಿದೆ.
ಇಂದು ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ನೌಕರರ ಆರೋಪದ ಪ್ರಕಾರ, ತುಮಕೂರು ನಾಡಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭುವನಾ ಅವರಿಗೆ ಮೇಲಧಿಕಾರಿಗಳಿಂದ ನಿರಂತರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರಂತರ ಕೆಲಸ ಮಾಡಿಸಲಾಗುತ್ತಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಅಪಘಾತದ ದಿನವೂ ಮುಂಜಾನೆ 6:30ರೊಳಗೆ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಮೇಲಧಿಕಾರಿಗಳ ಒತ್ತಡದಿಂದ ಗಡಿಬಿಡಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಗೂಳೂರು ಬಳಿ ಭೀಕರ ಅಪಘಾತ ಸಂಭವಿಸಿ ಭುವನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ನೌಕರರು ತಿಳಿಸಿದ್ದಾರೆ.
ಈ ಘಟನೆಗೆ ಡಿಸಿ, ಎಡಿಸಿ, ಎಸಿ ಹಾಗೂ ತಹಶೀಲ್ದಾರ್ ಅವರ ಅತಿಯಾದ ಕೆಲಸದ ಒತ್ತಡವೇ ನೇರ ಕಾರಣ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಗಳ ವರ್ಗಾವಣೆಗೂ ಆಗ್ರಹಿಸಿದ್ದಾರೆ.



