ಅಯೋಧ್ಯೆ: ರಾಮಮಂದಿರದ ಹುಂಡಿ ಹಣ ದುರುಪಯೋಗ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ಕದ್ದ ಹಣದಿಂದ ಐಷಾರಾಮಿ ಜೀವನ ನಡೆಸಿದ್ದು, ತನ್ನ ಗರ್ಲ್ಫ್ರೆಂಡ್ಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಿದ್ದಾನೆ ಎಂಬುದು ವಿಶೇಷ ತನಿಖಾ ತಂಡ (SIT) ತನಿಖೆಯಲ್ಲಿ ಬಹಿರಂಗವಾಗಿದೆ.
ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಅವಿನಾಶ್, ರಾಮಮಂದಿರದ ದೇಣಿಗೆ ಹಣ ಕದ್ದು ಅದರಿಂದ ಹೊಸ ಮನೆ ನಿರ್ಮಿಸಿ, ಕಾರು ಖರೀದಿಸಿದ್ದಾನೆ. ಅನುಮಾನ ಬರದಂತೆ ಕಾರನ್ನು ತನ್ನ ಸಹೋದರ ಅಭಿಷೇಕ್ ಹೆಸರಿನಲ್ಲಿ ನೋಂದಾಯಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಯ ಬ್ಯಾಂಕ್ ಖಾತೆಯ ವಹಿವಾಟು ಪರಿಶೀಲಿಸಿದ ಅಧಿಕಾರಿಗಳಿಗೆ ಆತನ ಆದಾಯಕ್ಕೆ ಮೀರಿದ ವೆಚ್ಚ ಕಂಡುಬಂದಿತ್ತು. ಇದೇ ಅನುಮಾನದ ಮೇರೆಗೆ ತನಿಖೆ ತೀವ್ರಗೊಳಿಸಿದಾಗ ದೇಣಿಗೆ ಹಣ ದುರುಪಯೋಗದ ಜಾಲ ಪತ್ತೆಯಾಗಿದೆ.
ತನಿಖೆಯ ವೇಳೆ ಅವಿನಾಶ್, ಸುಮಾರು 19 ಲಕ್ಷ ರೂಪಾಯಿಯನ್ನು ಕುಟುಂಬಸ್ಥರು ಮತ್ತು ಸ್ನೇಹಿತರ ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನ್ನೊಬ್ಬ ಸಹೋದರನ ಮದುವೆಗೆ ಸುಮಾರು 6 ಲಕ್ಷ ರೂಪಾಯಿ ಹಾಗೂ ಮತ್ತೊಬ್ಬ ಸಹೋದರನಿಗೆ 5ರಿಂದ 6 ಲಕ್ಷ ರೂಪಾಯಿ ನಗದು ಉಡುಗೊರೆಯಾಗಿ ನೀಡಿದ್ದಾನೆ. ಪರಿಚಯಸ್ಥರಿಗೂ ಹಣ ಹಂಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿಂದೆ ಪೊಲೀಸರು ಆರೋಪಿಯಿಂದ 20.39 ಲಕ್ಷ ರೂಪಾಯಿ ನಗದು, 1,121 ಅಮೆರಿಕನ್ ಡಾಲರ್, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಸದ್ಯ ಕಳವುಗೊಂಡ ಹಣವನ್ನು ಎಲ್ಲೆಲ್ಲಿ ಖರ್ಚು ಮಾಡಲಾಗಿದೆ, ಯಾರ್ಯಾರಿಗೆ ವರ್ಗಾವಣೆ ಮಾಡಲಾಗಿದೆ ಎಂಬುದರ ಕುರಿತು ಎಸ್ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದು, ಹಣ ಪಡೆದಿರುವ ಶಂಕಿತ ವ್ಯಕ್ತಿಗಳನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.



