ಕೊಪ್ಪಳ: ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ನಡೆದ ನಾಲ್ಕು ದಿನಗಳ ಬಳಿಕ ತಾಲೂಕು ಆಡಳಿತ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಭಕ್ತರು ನಂಬುತ್ತಾರೆ. ಜುಲೈ 3ರಂದು ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದರೂ, ಅದರ ವಿವರಗಳನ್ನು ನಾಲ್ಕು ದಿನಗಳ ಬಳಿಕ ಮಾತ್ರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ತಾಲೂಕು ಆಡಳಿತದ ಈ ವಿಳಂಬದ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮಾಹಿತಿ ಪ್ರಕಟಿಸಲು ತಡವಾದ ಕಾರಣವೇನು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಇದಕ್ಕೂ ಮೊದಲು ಮಾರ್ಚ್ 23ರಂದು ಹುಂಡಿ ಎಣಿಕೆ ನಡೆದಿತ್ತು. ಕಳೆದ 94 ದಿನಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು 71,77,460 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹುಂಡಿಯಲ್ಲಿ ಭಾರತೀಯ ಕರೆನ್ಸಿಯ ಜೊತೆಗೆ ನೇಪಾಳ, ಅಮೆರಿಕಾ, ಥೈಲ್ಯಾಂಡ್ ಹಾಗೂ ಹಾಂಕಾಂಗ್ ದೇಶಗಳ ಕರೆನ್ಸಿಗಳೂ ಪತ್ತೆಯಾಗಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಭಕ್ತರ ಸಂಖ್ಯೆಗೆ ಇದು ಸಾಕ್ಷಿಯಾಗಿದೆ.



